ADVERTISEMENT

ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಟೋಪ್ಲಿ

17 ವರ್ಷ ಹಿಂದಿನ ದಾಖಲೆ ಮುರಿದ ವೇಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2022, 2:56 IST
Last Updated 15 ಜುಲೈ 2022, 2:56 IST
ಇಂಗ್ಲೆಂಡ್‌ ವೇಗಿ ರೀಸಿ ಟೋಪ್ಲಿ (ಎಎಫ್‌ಪಿ ಚಿತ್ರ)
ಇಂಗ್ಲೆಂಡ್‌ ವೇಗಿ ರೀಸಿ ಟೋಪ್ಲಿ (ಎಎಫ್‌ಪಿ ಚಿತ್ರ)   

ಲಂಡನ್:ಭಾರತ ತಂಡದ ವಿರುದ್ಧ ಲಾರ್ಡ್ಸ್‌ನಲ್ಲಿ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ ಇಂಗ್ಲೆಂಡ್‌ ವೇಗಿ ರೀಸಿ ಟೋಪ್ಲಿ, 17 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದರು. ಆಂಗ್ಲರ ತಂಡದ ಪರ ಏಕದಿನ ಮಾದರಿಯಲ್ಲಿ ಶ್ರೇಷ್ಠ ಬೌಲಿಂಗ್‌ ಮಾಡಿದ ಸಾಧನೆ ಮಾಡಿದರು.

ಭಾರತ ವಿರುದ್ಧ 9.5 ಓವರ್‌ ಬೌಲಿಂಗ್‌ ಮಾಡಿದ ಟೋಪ್ಲಿ ಕೇವಲ 24 ರನ್‌ ಬಿಟ್ಟುಕೊಟ್ಟು ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು. ಇದು ಇಂಗ್ಲೆಂಡ್‌ ಪರ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಸಾಧನೆ ಆಗಿದೆ. ಸದ್ಯ ಇಂಗ್ಲೆಂಡ್‌ ತಂಡದ ಸಹಾಯಕ ಕೋಚ್‌ ಆಗಿರುವ ಪೌಲ್‌ ಕಾಲಿಂಗ್‌ವುಡ್‌2005ರಲ್ಲಿ ಬಾಂಗ್ಲಾದೇಶದ ವಿರುದ್ಧ 31 ರನ್‌ ನೀಡಿ 6 ವಿಕೆಟ್‌ ಪಡೆದಿದ್ದದ್ದು ಇದುವರೆಗೆ ದಾಖಲೆಯಾಗಿತ್ತು. ಆ ಪಂದ್ಯಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆದಿತ್ತು.

ಗುರುವಾರದ ಪಂದ್ಯದಲ್ಲಿಮೊದಲ ವಿಕೆಟ್ ರೂಪದಲ್ಲಿ ಭಾರತದ ನಾಯಕ ರೋಹಿತ್‌ ಶರ್ಮಾ ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಟೋಪ್ಲಿ, ಬಳಿಕ ಶಿಖರ್‌ ಧವನ್‌, ಸೂರ್ಯಕುಮಾರ್‌ ಯಾದವ್‌, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್‌ ಮತ್ತು ಪ್ರಸಿದ್ಧ ಕೃಷ್ಣ ಅವರನ್ನು ಔಟ್‌ ಮಾಡಿದರು.

ಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ 49 ಓವರ್‌ಗಳಲ್ಲಿ 246ರನ್‌ ಗಳಿಸಿ ಆಲೌಟ್‌ ಆಗಿತ್ತು. ಭಾರತ ಪರ ಲಾರ್ಡ್ಸ್ ಅಂಗಳದಲ್ಲಿ ಶ್ರೇಷ್ಠ ಬೌಲಿಂಗ್‌ (47 ರನ್‌ಗೆ 4 ವಿಕೆಟ್‌) ಸಾಧನೆ ಮಾಡಿದ ಯಜುವೇಂದ್ರ ಚಾಹಲ್, ಆತಿಥೇಯ ಬ್ಯಾಟಿಂಗ್‌ಗೆ ಬಲವಾದ ಪೆಟ್ಟು ಕೊಟ್ಟರು.

ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 146 ರನ್‌ ಗಳಿಸಿ ಸರ್ವಪತನ ಕಂಡಿತು. ಇದರೊಂದಿಗೆ ಇಂಗ್ಲೆಂಡ್‌, ಮೂರು ಪಂದ್ಯಗಳ ಸರಣಿಯಲ್ಲಿ 1–1 ಅಂತರದ ಸಮಬಲ ಸಾಧಿಸಿದೆ.

ಅಂತಿಮ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಭಾನುವಾರ ನಡೆಯಲಿದೆ.

ಇಂಗ್ಲೆಂಡ್‌ ಪರ ಅತ್ಯುತ್ತಮ ಬೌಲಿಂಗ್ ಸಾಧನೆ

ಆಟಗಾರ ಎದುರಾಳಿ ಓವರ್‌ಗಳು ಬಿಟ್ಟುಕೊಟ್ಟ ರನ್‌ ಪಡೆದ ವಿಕೆಟ್‌ ಸ್ಥಳ ದಿನಾಂಕ
ರೀಸಿ ಟೋಪ್ಲಿ ಭಾರತ 9.5 24 6 ಲಾರ್ಡ್ಸ್‌ ಜುಲೈ 14, 2022
ಪೌಲ್‌ ಕಾಲಿಂಗ್‌ವುಡ್‌ ಬಾಂಗ್ಲಾದೇಶ 10 31 6 ಟ್ರೆಂಟ್‌ಬ್ರಿಡ್ಜ್‌ ಜೂನ್ 21, 2005
ಕ್ರಿಸ್‌ ವೋಕ್ಸ್‌ ಆಸ್ಟ್ರೇಲಿಯಾ 10 45 6 ಬ್ರಿಸ್ಬೇನ್‌ ಜನವರಿ 30, 2011
ಕ್ರಿಸ್‌ ವೋಕ್ಸ್‌ ಶ್ರೀಲಂಕಾ 8 47 6 ಪಲ್ಲಿಕೆಲೆ ಡಿಸೆಂಬರ್ 10, 2014
ಮಾರ್ಕ್‌ ಎಲ್ಹಾಮ್‌ ಜಿಂಬಾಬ್ವೆ 10 15 5 ಕಿಂಬೆರ್ಲೆ ಜನವರಿ 30, 2000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.