ADVERTISEMENT

ವಿಶ್ವಕಪ್‌ಗೆ ರೋಹಿತ್, ಕೊಹ್ಲಿ ಅನುಮಾನ; ಬೂಮ್ರಾಗೆ ಟೆಸ್ಟ್‌ ನಾಯಕತ್ವ!: ಗವಾಸ್ಕರ್

ಪಿಟಿಐ
Published 13 ಮೇ 2025, 10:05 IST
Last Updated 13 ಮೇ 2025, 10:05 IST
ಸುನಿಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ಸುನಿಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ನವದೆಹಲಿ: ‘2027ರಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವುದು ಅನುಮಾನ’ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.

ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ‘ಸ್ಪೋರ್ಟ್ಸ್‌ ಟುಡೆ’ ಜೊತೆ ಮಾತನಾಡಿರುವ ಗವಾಸ್ಕರ್, ‘ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರ ವಹಿಸಿದವರು. ಬರಲಿರುವ ದಿನಗಳಲ್ಲಿ ಈ ಇಬ್ಬರು ತಮ್ಮ ಸ್ಫೋಟಕ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ. ಶತಕಗಳ ಮೇಲೆ, ಶತಕಗಳನ್ನು ಭಾರಿಸಲಿದ್ದಾರೆ. ದೇವರೂ ಇವರನ್ನು ತಡೆಯಲಾರರು’ ಎಂದಿದ್ದಾರೆ.

‘ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದದ್ದು ಅಚ್ಚರಿಯ ಸಂಗತಿಯಲ್ಲ. ಇಬ್ಬರೂ ಆಟಗಾರರು ಆಯ್ಕೆ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿಯೇ ಈ ತೀರ್ಮಾನಕ್ಕೆ ಬಂದಂತಿದೆ. ಜತೆಗೆ ತಾವು ತೆಗೆದುಕೊಂಡ ನಿರ್ಧಾರದ ಕುರಿತು ಅವರಿಗೆ ಸಂತಸವಿದ್ದಂತಿದೆ’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಆಯ್ಕೆ ಸಮಿತಿಯ ಹಾಲಿ ಮುಖ್ಯಸ್ಥ ಅಜಿತ್ ಅಗರ್ಕರ್‌ ಅವರ ಕಾರ್ಯವೈಖರಿಯನ್ನು ಹೊಗಳಿರುವ ಅವರು, ಭಾರತದ ಕ್ರಿಕೆಟ್‌ನ ಹಿತಾಸಕ್ತಿಗೆ ಪೂರಕವಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಬೂಮ್ರಾ ಟೆಸ್ಟ್‌ ತಂಡದ ನಾಯಕರಾಗಲಿ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಸಂದರ್ಭದಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ನಾಯಕರಾಗಲಿ ಎಂದು ಸುನಿಲ್ ಗವಾಸ್ಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಬೂಮ್ರಾ ವಿಕೆಟ್‌ ತೆಗೆಯುವ ಬೌಲರ್‌. ಅವರನ್ನು ಹೊರತುಪಡಿಸಿ ಬೇರೆ ಯಾರನ್ನೇ ನಾಯಕನನ್ನಾಗಿ ಮಾಡಿದರೂ ಅವರು ಒಂದು ಹೆಚ್ಚುವರಿ ಓವರ್ ತೆಗೆದುಕೊಳ್ಳಲಿದ್ದಾರೆ. ಆದರೆ ತಂಡಕ್ಕೆ ಆ ಒಂದು ಹೆಚ್ಚುವರಿ ಓವರ್‌ ಬೇಕಾಗಿದೆ’ ಎಂದಿದ್ದಾರೆ.

‘ರೋಹಿತ್ ಶರ್ಮಾ ತನ್ನ ಸ್ವಂತಕ್ಕಾಗಿ ಆಡಿದ ಆಟಗಾರನಲ್ಲ. ಆಡಿದ ಅಷ್ಟೂ ಪಂದ್ಯಗಳನ್ನು ಅವರು ಸಂಭ್ರಮಿಸಿದ್ದಾರೆ. ಶತಕದ ಹೊಸ್ತಿಲಲ್ಲೂ ಸವಾಲುಗಳನ್ನು ಎದುರಿಸುವ ಅವರ ಮನೋಭಾವವೇ ಅವರನ್ನು ಹಲವು ಶತಕಗಳಿಂದ ವಂಚಿತರನ್ನಾಗಿಸಿದೆ. ಹೀಗಾಗಿ ಅವರ ಆಟವನ್ನು ನೋಡಲು ಸಂತಸವೆನಿಸುತ್ತದೆ’ ಎಂದು ಗವಾಸ್ಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.