ರೋಹಿತ್ ಶರ್ಮಾ
(ಪಿಟಿಐ ಚಿತ್ರ)
ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಹಿಂದಿ ದಿನಪತ್ರಿಕೆ 'ದೈನಿಕ್ ಜಾಗರಣ್' ವರದಿ ಉಲ್ಲೇಖಿಸಿ 'ಎನ್‌ಡಿಟಿವಿ' ವರದಿ ಮಾಡಿದೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಸೋತರೆ ರೋಹಿತ್ ಶರ್ಮಾ ವಿದಾಯ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
ಹಾಗೊಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದರೂ ರೋಹಿತ್, ನಾಯಕತ್ವ ತೊರೆಯುವ ಸಾಧ್ಯತೆಯಿದ್ದು, ಓರ್ವ ಆಟಗಾರನಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದೆ.
ಹಾಗಾದ್ದಲ್ಲಿ ಏಕದಿನದಲ್ಲಿ ಶುಭಮನ್ ಗಿಲ್ ಅಥವಾ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಸ್ಥಾನ ದೊರಕುವ ಸಾಧ್ಯತೆಯಿದೆ.
ಕಳೆದ ವರ್ಷ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ ಘೋಷಿಸಿದ್ದರು.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸೋಲಿನ ಬಳಿಕ ರೋಹಿತ್, ದೀರ್ಘಾವಧಿಯ ಕ್ರಿಕೆಟ್‌ಗೂ ನಿವೃತ್ತಿ ಸಲ್ಲಿಸುವ ಕುರಿತು ವರದಿಗಳು ಬಂದಿದ್ದವು. ಆದರೆ ಈ ಎಲ್ಲ ವದಂತಿಗಳನ್ನು ಸ್ವತಃ ರೋಹಿತ್ ಅವರೇ ತಳ್ಳಿ ಹಾಕಿದ್ದರು.
ಈಗ ಏಕದಿನದಿಂದಲೂ 37 ವರ್ಷದ ರೋಹಿತ್ ವಿದಾಯ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ರೋಹಿತ್ ಅವರಿಂದ ಪ್ರತಿಕ್ರಿಯೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
(ನಾಳೆ) ಭಾನುವಾರ ದುಬೈಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.