ADVERTISEMENT

IND vs ENG 1st Test: ಹರ್ಭಜನ್ ಅನುಕರಿಸಿ ರೋಹಿತ್ ಶರ್ಮಾ ಬೌಲಿಂಗ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2021, 14:04 IST
Last Updated 6 ಫೆಬ್ರುವರಿ 2021, 14:04 IST
ಹರ್ಭಜನ್ ಸಿಂಗ್ ಶೈಲಿಯಲ್ಲಿ ರೋಹಿತ್ ಶರ್ಮಾ ಬೌಲಿಂಗ್ (ಚಿತ್ರ ಕೃಪೆ: ಟ್ವಿಟರ್‌ ವಿಡಿಯೊದ ಸ್ಕ್ರೀನ್‌ಶಾಟ್)
ಹರ್ಭಜನ್ ಸಿಂಗ್ ಶೈಲಿಯಲ್ಲಿ ರೋಹಿತ್ ಶರ್ಮಾ ಬೌಲಿಂಗ್ (ಚಿತ್ರ ಕೃಪೆ: ಟ್ವಿಟರ್‌ ವಿಡಿಯೊದ ಸ್ಕ್ರೀನ್‌ಶಾಟ್)   

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ‘ಹಿಟ್ ಮ್ಯಾನ್’ ರೋಹಿತ್ ಶರ್ಮಾ ವಿಭಿನ್ನವಾಗಿ ಬೌಲಿಂಗ್ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಭಾರತ ತಂಡದ ಖ್ಯಾತ ಆಫ್‌ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಅನುಕರಣೆ ಮಾಡಿ ಶರ್ಮಾ ಬೌಲಿಂಗ್‌ ಮಾಡಿರುವ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲೇ ಇಂಗ್ಲೆಂಡ್ ತಂಡವು ಭಾರತೀಯ ಬೌಲರ್‌ಗಳು ಬಸವಳಿಯುವಂತೆ ಮಾಡಿದೆ. ಎರಡನೇ ದಿನದಾಟದ ಭೋಜನ ವಿರಾಮದ ನಂತರವೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪಾರಮ್ಯ ಮೆರೆದಿದ್ದಾರೆ. ಚಹಾ ವಿರಾಮಕ್ಕೆ ಇನ್ನೇನು ಒಂದು ಓವರ್ ಬಾಕಿ ಇರುವಾಗ ನಾಯಕ ವಿರಾಟರ್ ಕೊಹ್ಲಿ ಅವರು ಚೆಂಡನ್ನು ರೋಹಿತ್ ಕೈಗಿತ್ತಿದ್ದಾರೆ. ಈ ಓವರ್‌ನ ಕೊನೆಯ ಎಸೆತದ ವೇಳೆ ಹರ್ಭಜನ್ ಸಿಂಗ್ ಅವರನ್ನು ಅನುಕರಿಸಿದ್ದಾರೆ ರೋಹಿತ್.

ರೋಹಿತ್ ಅವರು ನಾಯಕನಾಗಿರುವ ಐಪಿಎಲ್ ತಂಡ ‘ಮುಂಬೈ ಇಂಡಿಯನ್ಸ್’ ಕೂಡ ಈ ಕುರಿತು ಟ್ವೀಟ್ ಮಾಡಿದೆ. ‘ರೋಹಿತ್ ಶರ್ಮಾ ಅವರು ಚಹಾ ವಿರಾಮಕ್ಕೂ ಮೊದಲಿನ ಓವರ್‌ನ ಕೊನೆಯ ಎಸೆತವನ್ನು ಹರ್ಭಜನ್‌ರಂತೆಯೇ ಎಸೆದಿದ್ದಾರೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ.

ನಾಯಕ ಜೋ ರೂಟ್ ಅವರ ಭರ್ಜರಿ ದ್ವಿಶತಕದೊಂದಿಗೆ ಇಂಗ್ಲೆಂಡ್‌ ತಂಡವು 2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 555 ರನ್ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.