ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವರ್ಷ ಉತ್ತಮ ಪ್ರದರ್ಶನ ತೋರಿದ ಕರ್ನಾಟಕದವರಾದ ಭಾರತ ಮಹಿಳಾ ತಂಡದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಅವರನ್ನು ವರ್ಷದ ಉದಯೋನ್ಮುಖ ಆಟಗಾರ್ತಿ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಾಮನಿರ್ದೇಶನ ಮಾಡಿದೆ.
ಶ್ರೇಯಾಂಕಾ ಅವರೊಂದಿಗೆ ದಕ್ಷಿಣ ಆಫ್ರಿಕಾದ ಅನ್ನೇರಿ ಡೆರ್ಕ್‌ಸೆನ್, ಸ್ಕಾಟ್‌ಲೆಂಡ್‌ನ ಸಸ್ಕಿಯಾ ಹಾರ್ಲೇ ಹಾಗೂ ಐರ್ಲೆಂಡ್‌ನ ಫ್ರೆಯಾ ಸಾರ್ಜೆಂಟ್ ಅವರ ಹೆಸರೂ ನಾಮನಿರ್ದೇಶನಗೊಂಡಿವೆ.
2023ರ ಡಿಸೆಂಬರ್‌ನಲ್ಲಿ ನಡೆದ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಶ್ರೇಯದೊಂದಿಗೆ ಶ್ರೇಯಾಂಕಾ ಅವರು ಇತಿಹಾಸ ಬರೆದಿದ್ದಾರೆ. ಎಲ್ಲಾ ಬಗೆಯ ಕ್ರಿಕೆಟ್ ಮಾದರಿಗಳಲ್ಲೂ ಶ್ರೇಯಾಂಕಾ ಅವರ ಅದ್ಭುತ ಪ್ರದರ್ಶನವನ್ನು ಐಸಿಸಿ ಪರಿಗಣಿಸಿದೆ.
ಈ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೇಯಾಂಕಾ ಅವರು, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಸರಣಿ, ಮಹಿಳಾ ಟಿ20 ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಟಿ20 ವಿಶ್ವಕಪ್‌ನಲ್ಲಿ 14 ರನ್ ನೀಡಿ 2 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 105/8 ಕ್ಕೆ ಕಟ್ಟಿಹಾಕುವಲ್ಲಿ ಪಾಟೀಲ್ ಅವರ ಪಾತ್ರ ದೊಡ್ಡದಿತ್ತು. ಗುರಿಯನ್ನು ಭಾರತ ತಂಡವು 19 ಓವರ್‌ಗಳಲ್ಲಿ ಪೂರೈಸಿ ಗೆಲುವಿನ ನಗೆ ಬೀರಿತ್ತು.
ಬೌಲಿಂಗ್ ಪ್ರದರ್ಶನದೊಂದಿಗೆ ಶ್ರೇಯಾಂಕಾ ಅವರು ಉತ್ತಮ ಬ್ಯಾಟರ್ ಕೂಡಾ ಹೌದು. ಅವಕಾಶ ಸಿಕ್ಕಾಗಲೆಲ್ಲಾ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.