ADVERTISEMENT

ನಾಯಕನಾಗಿ ಗಿಲ್‌ ಹನಿಮೂನ್ ಅವಧಿ ಆನಂದಿಸುತ್ತಿದ್ದಾರೆ: ಗಂಗೂಲಿ

ಪಿಟಿಐ
Published 9 ಜುಲೈ 2025, 5:47 IST
Last Updated 9 ಜುಲೈ 2025, 5:47 IST
<div class="paragraphs"><p>ಶುಭಮನ್ ಗಿಲ್&nbsp;</p></div>

ಶುಭಮನ್ ಗಿಲ್ 

   

(ರಾಯಿಟರ್ಸ್ ಚಿತ್ರ)

ಕೋಲ್ಕತ್ತ: 'ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಅವರು ಹನಿಮೂನ್ ಅವಧಿಯನ್ನು ಆನಂದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಒತ್ತಡ ಸೃಷ್ಟಿಯಾಗುವ ಸಾಧ್ಯತೆಯಿದೆ' ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಅಲ್ಲದೆ ಭಾರತೀಯ ಕ್ರಿಕೆಟ್‌ಗೆ ಎಂದಿಗೂ ಪ್ರತಿಭಾವಂತ ಆಟಗಾರರ ಕೊರತೆ ಕಾಡಿಲ್ಲ ಎಂದು ಬಿಸಿಸಿಐನ ಮಾಜಿ ಅಧ್ಯಕ್ಷರೂ ಆಗಿರುವ ದಾದಾ ಖ್ಯಾತಿಯ ಗಂಗೂಲಿ ಉಲ್ಲೇಖಿಸಿದ್ದಾರೆ.

'ಇದು ನಿಜಕ್ಕೂ ಅದ್ಭುತ ಆಟ. ಗಿಲ್ ವೃತ್ತಿಜೀವನದ ಹೊಸ ದಿಕ್ಕನ್ನು ತೆರೆದುಕೊಂಡಿದ್ದಾರೆ. ಅವರು ಮಧ್ಯಮ ಕ್ರಮಾಂಕಕ್ಕೆ ಹೆಚ್ಚು ಸೂಕ್ತ ಎಂದು ನಾನು ಭಾವಿಸಿದ್ದೇನೆ. ನಾಯಕರಾಗಿ ಹನಿಮೂನ್ ಅವಧಿ ಆನಂದಿಸುತ್ತಿದ್ದಾರೆ. ಆದರೆ ಸಮಯ ಸಾಗಿದಂತೆ ಒತ್ತಡ ಸೃಷ್ಟಿಯಾಗಲಿದೆ. ಸರಣಿಯ ಮುಂದಿನ ಮೂರು ಪಂದ್ಯಗಳಲ್ಲಿ ಒತ್ತಡ ಹೆಚ್ಚಾಗಬಹುದು' ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಪ್ರಸಕ್ತ ಸಾಗುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗಿಲ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ನಾಯಕ ಪಟ್ಟ ವಹಿಸಿದ್ದರು. ಅಲ್ಲದೆ ನಾಯಕರಾದ ಮೊದೆಲೆರಡು ಪಂದ್ಯಗಳಲ್ಲೇ ದ್ವಿಶತಕ ಹಾಗೂ ಎರಡು ಶತಕಗಳನ್ನು (147, 269, 161) ಬಾರಿಸಿದ್ದಾರೆ.

ಒಟ್ಟಾರೆಯಾಗಿ ಎರಡು ಪಂದ್ಯಗಳಲ್ಲೇ 146.25ರ ಸರಾಸರಿಯಲ್ಲಿ ಒಟ್ಟು 585 ರನ್ ಕಲೆ ಹಾಕಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲು ಗಿಲ್ ಅವರೀಗ ಕೇವಲ 18 ರನ್‌ಗಳ ಅಗತ್ಯವಿದೆ. ಆ ಮೂಲಕ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು(2002ರಲ್ಲಿ 602 ರನ್) ಮುರಿಯಲಿದ್ದಾರೆ.

'ಗಿಲ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಇದಾಗಿದೆ. ಈ ಕುರಿತು ನನಗೆ ಅಚ್ಚರಿಯಾಗಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಅಪಾರ ಪ್ರತಿಭಾವಂತ ಆಟಗಾರರಿದ್ದಾರೆ. ಪ್ರತಿಯೊಂದು ಪೀಳಿಗೆಯಲ್ಲೂ ಅತ್ಯುತ್ತಮ ಆಟಗಾರರಿದ್ದು, ಕೊರತೆಯನ್ನು ನೀಗಿಸುತ್ತಾರೆ' ಎಂದು ಹೇಳಿದ್ದಾರೆ.

'ಸುನಿಲ್ ಗವಾಸ್ಕರ್, ಕಪಿಲ್ ದೇವ್ ಬಳಿಕ ಸಚಿನ್ ತೆಂಡೂಲ್ಕರ್, ರಾಹಲ್ ದ್ರಾವಿಡ್, ಅನಿಲ್ ಕುಂಬ್ಳೆ. ಅದಾದ ಬಳಿಕ ವಿರಾಟ್ ಕೊಹ್ಲಿ. ಈಗ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಹೀಗೆ ಮುಂದುವರಿಯುತ್ತದೆ' ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, 'ಈಗಾಗಲೇ ಹೇಳುವುದು ಉಚಿತವಲ್ಲ. ವಾಸ್ತವ ಸ್ಥಿತಿ ಬೇರೆಯಾಗಿದೆ. ನೋಡೋಣ, ಸದ್ಯಕ್ಕೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.