ADVERTISEMENT

ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2025, 3:10 IST
Last Updated 20 ಅಕ್ಟೋಬರ್ 2025, 3:10 IST
<div class="paragraphs"><p>ಶುಭಮನ್ ಗಿಲ್‌ ಹಾಗೂ ವಿರಾಟ್‌ ಕೊಹ್ಲಿ (ಸಂಗ್ರಹ ಚಿತ್ರ)</p></div>

ಶುಭಮನ್ ಗಿಲ್‌ ಹಾಗೂ ವಿರಾಟ್‌ ಕೊಹ್ಲಿ (ಸಂಗ್ರಹ ಚಿತ್ರ)

   

ಕೃಪೆ: ಪಿಟಿಐ

ಪರ್ತ್‌: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಅಂತರದ ಸೋಲು ಕಂಡಿದೆ.

ADVERTISEMENT

ಮಳೆ ಅಡ್ಡಿಯಿಂದಾಗಿ 26 ಓವರ್‌ಗಳಿಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, 9 ವಿಕೆಟ್‌ ಕಳೆದುಕೊಂಡು 136 ರನ್‌ ಕಲೆಹಾಕಿತ್ತು. ಈ ಗುರಿಯನ್ನು ಆಸ್ಟ್ರೇಲಿಯಾ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 21.1 ಓವರ್‌ಗಳಲ್ಲೇ ತಲುಪಿತು.

ಮುಂದಿನ ಪಂದ್ಯಗಳು ಅಡಿಲೇಡ್‌ ಹಾಗೂ ಸಿಡ್ನಿಯಲ್ಲಿ ಕ್ರಮವಾಗಿ ಅಕ್ಟೋಬರ್‌ 23, 25ರಂದು ನಡೆಯಲಿವೆ.

'ಮೊದಲ' ಪಂದ್ಯದಲ್ಲಿ ಸೋಲು
ಏಕದಿನ ಕ್ರಿಕೆಟ್‌ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಶುಭಮನ್ ಗಿಲ್‌ ಮುನ್ನಡೆಸುತ್ತಿರುವ ಮೊದಲ ಸರಣಿ ಇದು. ಆರಂಭಿಕ ಪಂದ್ಯದಲ್ಲೇ ಸೋಲು ಎದುರಾಗಿದೆ.

2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಫೈನಲ್‌ಗೆ ಮುನ್ನಡೆಸಿದ್ದ ಹಾಗೂ ಇದೇ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದುಕೊಟ್ಟ ನಾಯಕ ರೋಹಿತ್‌ ಶರ್ಮಾ ಬದಲು ಗಿಲ್‌ ಅವರಿಗೆ ತಂಡದ ಹೊಣೆ ವಹಿಸಲಾಗಿದೆ.

ವಿರಾಟ್‌ ದಾಖಲೆ ಸರಿಗಟ್ಟಿದ ಗಿಲ್‌!
ಗಿಲ್‌ ಅವರಿಗೆ ನಾಯಕನಾಗಿ ಮೊದಲ ಪಂದ್ಯದಲ್ಲಿ ಸೋಲು ಎದುರಾಗುತ್ತಿರುವುದು ಇದೇ ಮೊದಲಲ್ಲ. ಅವರು ಟೆಸ್ಟ್ ಹಾಗೂ ಟಿ20 ಮಾದರಿಯಲ್ಲೂ ತಂಡ ಮುನ್ನಡೆಸಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಇದರೊಂದಿಗೆ ನಾಯಕನಾಗಿ ಮೂರೂ ಮಾದರಿಯ ಮೊದಲ ಪಂದ್ಯದಲ್ಲಿ ಸೋತ ಟೀಂ ಇಂಡಿಯಾದ ಎರಡನೇ ನಾಯಕ ಎನಿಸಿದ್ದಾರೆ. ಇದಕ್ಕೂ ಮೊದಲು ವಿರಾಟ್‌ ಕೊಹ್ಲಿ ಈ ಅನಗತ್ಯ ದಾಖಲೆ ಬರೆದಿದ್ದರು.

ಕಳೆದ ವರ್ಷ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಗಿಲ್‌ ತಂಡ ಮುನ್ನಡೆಸಿದ್ದರು. ಭಾರತ, ಮೊದಲ ಪಂದ್ಯದಲ್ಲಿ ಸೋಲು ಕಂಡರೂ, ನಂತರ 4–1 ಅಂತರದಿಂದ ಸರಣಿ ಜಯ ಸಾಧಿಸಿತ್ತು.

ಇದೇ ವರ್ಷದ ಆರಂಭದಲ್ಲಿ ಟೆಸ್ಟ್‌ ತಂಡದ ನಾಯಕನಾಗಿ ನೇಮಕವಾಗಿದ್ದ ಗಿಲ್‌ಗೆ ಇಂಗ್ಲೆಂಡ್‌ನಲ್ಲಿ ಮೊದಲ ಸವಾಲು ಎದುರಾಗಿತ್ತು. ಐದು ಪಂದ್ಯಗಳ ಸರಣಿಯ ಪ್ರಥಮ ಪಂದ್ಯದಲ್ಲಿ ತಂಡ 5 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಆದರೆ, ನಂತರ ಚೇತರಿಕೆ ಆಟವಾಡಿದ್ದ ಟೀಂ ಇಂಡಿಯಾ, ಸರಣಿಯನ್ನು 2–2ರಿಂದ ಸಮ ಮಾಡಿಕೊಂಡಿತ್ತು.

ವಿರಾಟ್‌ ಕೊಹ್ಲಿ ಅವರು, 2013ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಮಾದರಿಯಲ್ಲಿ, 2014ರಲ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಮಾದರಿಯಲ್ಲಿ ಮತ್ತು 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ20 ಮಾದರಿಯಲ್ಲಿ ನಾಯಕನಾಗಿ ಮೊದಲ ಪಂದ್ಯವನ್ನು ಸೋತಿದ್ದರು.

ಅನಗತ್ಯ ದಾಖಲೆ ಲಿಸ್ಟ್‌ನಲ್ಲಿ 9 ನಾಯಕರು
ನಾಯಕನಾಗಿ ಮೂರೂ ಮಾದರಿಯ ಪ್ರಥಮ ಪಂದ್ಯ ಸೋತ ನಾಯಕರ ಪಟ್ಟಿಯಲ್ಲಿ ಗಿಲ್‌ ಹಾಗೂ ಕೊಹ್ಲಿ ಮಾತ್ರವಲ್ಲ; ಒಟ್ಟು 9 ಬ್ಯಾಟರ್‌ಗಳಿದ್ದಾರೆ.

ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌ ಹಾಗೂ ಬ್ರೆಂಡನ್‌ ಮೆಕ್ಲಂ, ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್‌, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್‌, ಜಿಂಬಾಬ್ವೆಯ ಹ್ಯಾಮಿಲ್ಟನ್‌ ಮಸಕಜ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌, ವೆಸ್ಟ್‌ ಇಂಡೀಸ್‌ನ ಜೇಸನ ಹೋಲ್ಡರ್‌ ಅವರೂ ಈ ಲಿಸ್ಟ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.