ಸ್ಟೀವ್ ಸ್ಮಿತ್
(ರಾಯಿಟರ್ಸ್ ಸಂಗ್ರಹ ಚಿತ್ರ)
ಗಾಲೆ: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್, ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 36ನೇ ಶತಕದ ಸಾಧನೆ ಮಾಡಿದ್ದಾರೆ.
ಆ ಮೂಲಕ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮತ್ತು ಸಮಕಾಲೀನ ಬ್ಯಾಟರ್ ಇಂಗ್ಲೆಂಡ್‌ನ ಜೋ ರೂಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಸ್ಮಿತ್ ಸ್ಮರಣೀಯ ಶತಕದ ಸಾಧನೆ ಮಾಡಿದ್ದಾರೆ.
116ನೇ ಪಂದ್ಯ ಆಡುತ್ತಿರುವ (206 ಇನಿಂಗ್ಸ್) ಸ್ಮಿತ್ 56.90ರ ಸರಾಸರಿಯಲ್ಲಿ ಒಟ್ಟು 10,243 ರನ್ ಪೇರಿಸಿದ್ದಾರೆ. ಇದೇ ಸರಣಿಯ ಮೊದಲ ಪಂದ್ಯದಲ್ಲೂ ಶತಕ ಗಳಿಸಿದ್ದ ಸ್ಮಿತ್, 10,000 ರನ್‌ಗಳ ಮೈಲಿಗಲ್ಲು ತಲುಪಿದ್ದರು.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ 257 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ, ತಾಜಾ ವರದಿಯ ವೇಳೆಗೆ 69 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದೆ.
ಸ್ಮಿತ್‌ಗೆ ಉತ್ತಮ ಸಾಥ್ ಕೊಟ್ಟಿರುವ ಅಲೆಕ್ಸ್ ಕ್ಯಾರಿ ಸಹ ಶತಕದ ಸಾಧನೆ ಮಾಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಆಸೀಸ್ ತಂಡವನ್ನು ಸ್ಮಿತ್ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್ ಹಾಗೂ 242 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.
ಮತ್ತೊಂದೆಡೆ 100ನೇ ಪಂದ್ಯ ಆಡುತ್ತಿರುವ ಶ್ರೀಲಂಕಾದ ದಿಮುತ್ ಕರುಣಾರತ್ನೆ, ಈ ಪಂದ್ಯದ ಬಳಿಕ ವಿದಾಯ ಹೇಳುವುದಾಗಿ ಪ್ರಕಟಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಾಧಕರು:
ಸಚಿನ್ ತೆಂಡೂಲ್ಕರ್: 51
ಜಾಕ್ ಕಾಲಿಸ್: 45
ರಿಕಿ ಪಾಂಟಿಂಗ್: 41
ಕುಮಾರ ಸಂಗಕ್ಕರ: 38
ಸ್ಟೀವ್ ಸ್ಮಿತ್: 36
ಜೋ ರೂಟ್: 36
ರಾಹುಲ್ ದ್ರಾವಿಡ್: 36
ಯೂನಿಸ್ ಖಾನ್: 34
ಸುನಿಲ್ ಗವಾಸ್ಕರ್: 34
ಬ್ರಿಯಾನ್ ಲಾರಾ: 34
ಮಹೇಲಾ ಜಯವರ್ಧನೆ: 34
ಪಾಂಟಿಂಗ್ ದಾಖಲೆ ಮುರಿದ ಸ್ಮಿತ್...
ಆಸ್ಟ್ರೇಲಿಯಾದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದಿರುವ ಆಟಗಾರರ ಪಟ್ಟಿಯಲ್ಲೂ ಸ್ಮಿತ್ ಮುಂಚೂಣಿಯಲ್ಲಿದ್ದಾರೆ. ಸ್ಮಿತ್ ಈವರೆಗೆ 116 ಪಂದ್ಯಗಳಲ್ಲಿ 197 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ (196) ದಾಖಲೆಯನ್ನು ಮುರಿದಿದ್ದಾರೆ.
ಇನ್ನು ಒಟ್ಟಾರೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ (210) ಅಗ್ರಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.