ADVERTISEMENT

ಐಸಿಸಿ | ವರ್ಷದ ಟಿ20, ಏಕದಿನ ತಂಡದಲ್ಲಿ ಸ್ಥಾನ ಪಡೆದ ಸ್ಮೃತಿ ಮಂದಾನ

ಏಜೆನ್ಸೀಸ್
Published 17 ಡಿಸೆಂಬರ್ 2019, 12:54 IST
Last Updated 17 ಡಿಸೆಂಬರ್ 2019, 12:54 IST
   

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಐಸಿಸಿಯವರ್ಷದ ಟಿ20 ಹಾಗೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಂದಾನ ಜೊತೆಗೆ ವೇಗಿ ಜೂಲನ್ ಗೋಸ್ವಾಮಿ, ಪೂನಂ ಯಾದವ್‌, ಶಿಖಾ ಪಾಂಡೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದು, ಆಲ್ರೌಂಡರ್‌ ದೀಪ್ತಿ ಶರ್ಮಾ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

23 ವರ್ಷದ ಮಂದಾನ 51 ಏಕದಿನ, 66 ಟಿ20 ಹಾಗೂ 2 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 4 ಶತಕ ಹಾಗೂ 17 ಅರ್ಧಶತಕಗಳೊಂದಿಗೆ 2,025 ರನ್‌ ಪೇರಿಸಿರುವ ಮಂದಾನ, ಟಿ20 ಯಲ್ಲಿ 1,451 ರನ್‌ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾ ಆಟಗಾರ್ತಿ ಅಲಿಸ್ಸಾ ಹೀಲಿ ವರ್ಷ ಟಿ20 ಆಟಗಾರ್ತಿ ಎನಿಸಿದ್ದಾರೆ. ಅವರು ಈ ವರ್ಷ ಶ್ರೀಲಂಕಾ ವಿರುದ್ಧ ಕೇವಲ 61 ಎಸೆತಗಳಲ್ಲಿ 148 ರನ್‌ ಗಳಿಸಿದ್ದರು.

ADVERTISEMENT

ಏಕದಿನ ಆಟಗಾರ್ತಿ ಗೌರವಕ್ಕೆ ಎಲಿಸ್ಸೆ ಪೆರ್ರಿ ಆಯ್ಕೆಯಾಗಿದ್ದಾರೆ. ಆಸಿಸ್‌ ಆಲ್ರೌಂಡರ್‌ ಪೆರ್ರಿ 2019ರಲ್ಲಿ ಒಟ್ಟು 441 ರನ್‌ ಮತ್ತು 21 ವಿಕೆಟ್‌ ಕಬಳಿಸಿದ್ದಾರೆ. ಮಾತ್ರವಲ್ಲದೆ ಪೆರ್ರಿಗೆ ವರ್ಷದ ಆಟಗಾರ್ತಿ ಗೌರವವೂ ಒಲಿದಿದೆ.

ಥೈಲ್ಯಾಂಡ್‌ನ ಚನಿದಾ ಸತ್ತಿರುವಾಂಗ್‌ ಉದಯೋನ್ಮುಖ ಆಟಗಾರ್ತಿ ಎನಿಸಿದ್ದಾರೆ. 26 ವರ್ಷದ ಚನಿದಾ, ಈ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್‌ ಅರ್ಹತಾ ಟೂರ್ನಿ ವೇಳೆ 12 ವಿಕೆಟ್‌ ಪಡೆದಿದ್ದರು.

ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಏಕದಿನ ಮತ್ತು ಟಿ20 ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.