ADVERTISEMENT

ಭಾರತ ಬೌಲರ್‌ಗಳನ್ನು ಬೆಂಡೆತ್ತಿದ ದ.ಆಫ್ರಿಕಾ: 2 ಶತಕ ದಾಖಲಾದರೂ ಭಾರತಕ್ಕಿಲ್ಲ ಜಯ

ಪಿಟಿಐ
Published 3 ಡಿಸೆಂಬರ್ 2025, 17:20 IST
Last Updated 3 ಡಿಸೆಂಬರ್ 2025, 17:20 IST
   

ರಾಯಪುರ (ಪಿಟಿಐ): ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕವಾಡ ಅವರ ಶತಕದ ಬಲದಿಂದ ಭಾರತ ತಂಡವು ಒಡ್ಡಿದ ದೊಡ್ಡ ಮೊತ್ತದ ಗುರಿಯನ್ನು ಮೀರಿ ನಿಂತ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು. 

ಬುಧವಾರ ಇಲ್ಲಿ ನಡೆದ ಎರಡನೇ ಪಂದ್ಯದಲ್ಲಿ 359 ರನ್‌ಗಳ ಕಠಿಣ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಪ್ರವಾಸಿ ಬಳಗವು 4 ವಿಕೆಟ್‌ಗಳಿಂದ ಜಯಿಸಿತು. ಏಡನ್ ಮರ್ಕರಂ (110 ರನ್) ಅವರ ಶತಕ, ಮ್ಯಾಥ್ಯೂ ಬ್ರೀಜ್‌(68 ರನ್) ಹಾಗೂ ಡಿವಾಲ್ಡ್‌ ಬ್ರೆವಿಸ್ (54 ರನ್) ಅವರು ಗೆಲುವಿನ ರೂವಾರಿಗಳಾದರು. ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. ಇನ್ನೊಂದು ಪಂದ್ಯ ಬಾಕಿ ಇದೆ. 

ಈ ಪಂದ್ಯದಲ್ಲಿ  ವಿರಾಟ್ ಕೊಹ್ಲಿ (102; 93ಎಸೆತ) ಮತ್ತು ಋತುರಾಜ್ ಗಾಯಕವಾಡ (105; 83ಎಸೆತ) ಅವರ ಶತಕಗಳು ಮಾತ್ರ ಭಾರತದ ಅಭಿಮಾನಿಗಳ ಪಾಲಿಗೆ ಸವಿನೆನಪಾಗಿ ಉಳಿದವು.   

ADVERTISEMENT

ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 53ನೇ ಶತಕ ಇದಾಗಿದೆ. ಋತುರಾಜ್ ಅವರಿಗೆ ಮೊದಲನೇಯದ್ದು. ನಾಯಕ  ಕೆ.ಎಲ್ ರಾಹುಲ್ (ಔಟಾಗದೇ 66) ಅವರೂ ಉಪಯುಕ್ತ ಕಾಣಿಕೆ ನೀಡಿದರು. ಅದರಿಂದಾಗಿ ಆತಿಥೇಯ ತಂಡವು 50 ಓವರ್‌ಗಳಲ್ಲಿ  5 ವಿಕೆಟ್‌ಗಳಿಗೆ 358 ರನ್ ಗಳಿಸಿತು. 

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 49.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 362 ರನ್ ಗಳಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.