ADVERTISEMENT

Cricket Museum: ‘ಬ್ಲೇಡ್ಸ್ ಆಫ್ ಗ್ಲೋರಿ’ ಪುಣೆಯ ಕ್ರಿಕೆಟ್ ದೇಗುಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 0:59 IST
Last Updated 19 ಜನವರಿ 2025, 0:59 IST
ವಿರಾಟ್‌ ಕೊಹ್ಲಿ ಗ್ಯಾಲರಿ 
ವಿರಾಟ್‌ ಕೊಹ್ಲಿ ಗ್ಯಾಲರಿ    

ಅದು ಮ್ಯಾಚ್‌ನ ಕೊನೆಯ ಗಳಿಗೆ. ಪ್ರೇಕ್ಷಕರು ಕಾತುರರಾಗಿ ತಮ್ಮ ತಮ್ಮ ಸೀಟ್‌ಗಳಿಂದ ಎದ್ದು ನಿಂತಿದ್ದಾರೆ. ಶ್ರೀಲಂಕಾದ ಬೌಲರ್ ಧೋನಿಗೆ ಚೆಂಡನ್ನೆಸೆಯುತ್ತಾನೆ. ‘ಧೋನಿ ಫಿನಿಶಿಸ್ ಆಫ್ ಇನ್ ಸ್ಟೈಲ್’ ಎಂದು ವೀಕ್ಷಕ ವಿವರಣೆಗಾರ ಘೋಷಿಸುತ್ತಾನೆ. ಸ್ಟೇಡಿಯಂ ತುಂಬೆಲ್ಲ ಹರ್ಷೋನ್ಮಾದ! ಧೋನಿಯ ಈ ಸಿಕ್ಸ್ 2011ರಲ್ಲಿ ಭಾರತಕ್ಕೆ ವಿಶ್ವಕಪ್‌ ತಂದು ಕೊಡುತ್ತದೆ.

ಪುಣೆಯ ‘ಬ್ಲೇಡ್ಸ್ ಆಫ್ ಗ್ಲೋರಿ’ ಎಂಬ ದೇಶದ ಮೊದಲ ಕ್ರಿಕೆಟ್ ಮ್ಯೂಸಿಯಂನಲ್ಲಿ ಪ್ರದರ್ಶಿತವಾದ ಪ್ರತಿಯೊಂದು ವಸ್ತುವೂ ಇಂತಹ ಅನೇಕ ರೋಚಕ ಕ್ಷಣಗಳನ್ನು ಸೆರೆಹಿಡಿದಿದೆ. ಕ್ರಿಕೆಟ್‍ ಅನ್ನು ನಿಷ್ಠೆಯಿಂದ ಆರಾಧಿಸುವ ಕೋಟ್ಯಂತರ ಜನರಿರುವ ಭಾರತದಲ್ಲಿ, ಕ್ರಿಕೆಟ್‍ ಆಟಕ್ಕೇ ಮೀಸಲಿರುವ ಇಂತಹ ಮ್ಯೂಸಿಯಂ ಇರುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ರಣಜಿ ಕ್ರಿಕೆಟ್ ಮಾಜಿ ಆಟಗಾರ ರೋಹನ್ ಪಾಟೆ ಸ್ಥಾಪಿಸಿರುವ ಈ ಮ್ಯೂಸಿಯಂನಲ್ಲಿ ಕ್ರಿಕೆಟ್‍ಗೆ ಸಂಬಂಧಿಸಿದ ಸಾವಿರಾರು ವಸ್ತುಗಳು ಪ್ರದರ್ಶನಗೊಂಡಿವೆ. ಪ್ರವೇಶ ದ್ವಾರದಲ್ಲೇ ಕ್ರಿಕೆಟ್ ಬ್ಯಾಟ್‍ನ ಹಂತ ಹಂತವಾದ ವಿಕಾಸವನ್ನು ಪುಟ್ಟ ಮಾದರಿಗಳ ಮೂಲಕ ತೋರಿಸಲಾಗಿದೆ.

ರೋಹನ್ ತಮ್ಮ ರಿಯಲ್ ಎಸ್ಟೇಟ್ ಕಂಪನಿಗಾಗಿ ಸಚಿನ್ ತೆಂಡೂಲ್ಕರ್‌ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗುವಂತೆ ಕೋರಲು 2010 ರಲ್ಲಿ ಭೇಟಿಯಾಗಿದ್ದರು. ಆ ಭೇಟಿಯಲ್ಲಿ ಸಚಿನ್‍ ಅವರ ನೆನಪಿನ ಕಾಣಿಕೆ ಎಂದು ಅವರ ಬ್ಯಾಟ್‍ ಅನ್ನು ರೋಹನ್ ಪಡೆದರು. ಆಗ ಅವರಿಗೆ ಸಚಿನ್‍ ಬ್ಯಾಟ್ ಸಿಕ್ಕಿದ್ದಾದರೆ, ಬೇರೆ ಆಟಗಾರರ ವಸ್ತುಗಳನ್ನು ಪಡೆಯಲು ಏಕೆ ಪ್ರಯತ್ನಿಸಬಾರದು ಎನ್ನುವ ಯೋಚನೆ ಬಂದಿತು. ಅದಕ್ಕಾಗಿ ದೇಶ ವಿದೇಶಗಳಲ್ಲಿ ಸಂಚರಿಸಿ ಆಟಗಾರರ ಹಸ್ತಾಕ್ಷರಗಳನ್ನು ಮತ್ತು ಅವರ ಕ್ರಿಕೆಟ್‌ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. 2011ರ ವಿಶ್ವಕಪ್ ಕ್ರಿಕೆಟ್‌ ಪಂದ್ಯದಲ್ಲಿ ಬಹಳಷ್ಟು ಆಟಗಾರರ ಹಸ್ತಾಕ್ಷರವನ್ನು ಸಂಗ್ರಹಿಸಿದರು. ಮೇ 2, 2012 ರಂದು ಸಚಿನ್ ತೆಂಡೂಲ್ಕರ್ ‘ಬ್ಲೇಡ್ಸ್ ಆಫ್ ಗ್ಲೋರಿ’ ಮ್ಯೂಸಿಯಂ ಅನ್ನು ಉದ್ಘಾಟಿಸಿದರು.

ADVERTISEMENT

ಕರ್ಟ್ಲಿ ಆ್ಯಂಬ್ರೋಸ್‌ ಕಪಿಲ್‌ ದೇವ್‌ ವಾಸಿಂ ಅಕ್ರಂ ಮುಂತಾದ ದಿಗ್ಗಜ ಬೌಲರ್‌ಗಳ ಹಸ್ತಾಕ್ಷರ ಇರುವ ಕ್ರಿಕೆಟ್‌ ಬಾಲ್‌ಗಳು

ಸಚಿನ್ ಗಮನಿಸಿದ ಈ ಮ್ಯೂಸಿಯಂನ ವೈಶಿಷ್ಟ್ಯವೆಂದರೆ ಬೇರೆ ದೇಶಗಳ ಕ್ರಿಕೆಟ್ ಮ್ಯೂಸಿಯಂಗಳಲ್ಲಿ ಆಯಾ ದೇಶಗಳ ಆಟಗಾರರ ವಸ್ತುಗಳು ಮಾತ್ರ ಪ್ರದರ್ಶಿಸಲಾಗಿರುತ್ತದೆ. ‘ಬ್ಲೇಡ್ಸ್ ಆಫ್ ಗ್ಲೋರಿ’ಯಲ್ಲಿ ಬೇರೆ ಬೇರೆ ದೇಶಗಳ ಮಹಿಳಾ ಹಾಗೂ ಪುರುಷ ಆಟಗಾರರ ಕ್ರಿಕೆಟ್‌ ವಸ್ತುಗಳೂ ಇವೆ.

ಒಂದು ಮ್ಯಾಚ್‌ನಲ್ಲಿ 300 ರನ್‍ಗಳನ್ನು ಗಳಿಸಿದ ಬ್ಯಾಟರ್‌ಗಳ ಹಸ್ತಾಕ್ಷರಗಳುಳ್ಳ ಅವರವರ ಬ್ಯಾಟ್‍ಗಳು, ಬೇರೆ ಬೇರೆ ವರ್ಷಗಳ ವಿಶ್ವಕಪ್ ಪಂದ್ಯಗಳಲ್ಲಿ ಗೆದ್ದ ತಂಡದ ಆಟಗಾರರ ಹಸ್ತಾಕ್ಷರಗಳುಳ್ಳ ಬ್ಯಾಟ್‍ಗಳು, ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟೀಯ ಮಹಿಳಾ ಮತ್ತು ಪುರುಷ ಆಟಗಾರರ ಜರ್ಸಿಗಳು, ಟಿ ಶರ್ಟ್‌ಗಳು, ಟ್ರ‍್ಯಾಕ್ ಪ್ಯಾಂಟ್‍ಗಳು, ಹೆಲ್ಮೆಟ್‌ಗಳು, ಹೆಚ್ಚು ವಿಕೆಟ್ ಪಡೆದು ದಾಖಲೆ ಮಾಡಿದ ಆಟಗಾರರ ಹಸ್ತಾಕ್ಷರಗಳುಳ್ಳ ಬಾಲ್‍ಗಳು–ಹೀಗೆ ಸಾವಿರಕ್ಕೂ ಹೆಚ್ಚು ವಸ್ತುಗಳು ಇಲ್ಲಿವೆ.

ಕ್ರಿಕೆಟ್‌ ಧರ್ಮ ಎನ್ನುವ ದೇಶ

ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಬೇರೆ ಎಲ್ಲ ಆಟಗಳಿಗಿಂತ ಹೆಚ್ಚು ಮಹತ್ವ ನೀಡಲಾಗುತ್ತದೆ. ಒಂದು ವೇಳೆ ಕ್ರಿಕೆಟ್‌ ಅನ್ನು ಒಂದು ಧರ್ಮ ಎಂದು ಪರಿಗಣಿಸುವುದಾದರೆ, ಸಚಿನ್ ಅದರ ದೇವರು ಎಂದು ಭಾವಿಸಲಾಗುತ್ತದೆ. ಅವರ ಸಾಧನೆಯನ್ನು ನೋಡಿದರೆ ಇದರಲ್ಲಿ ಉತ್ಪ್ರೇಕ್ಷೆಯೇನೂ ಅನಿಸುವುದಿಲ್ಲ. ಅದನ್ನು ಗೌರವಿಸಲೆಂದು ಸಚಿನ್‍ಗಾಗಿಯೇ ಇಲ್ಲಿ ಪ್ರತ್ಯೇಕ ವಿಭಾಗವೇ ಇದೆ. ಸಚಿನ್ ನೂರು ಶತಕಗಳನ್ನು ಹೊಡೆದದ್ದು ಗೊತ್ತಿರುವ ವಿಷಯ. ಒಂದು ಗೋಡೆ ಮೇಲೆ ಪುಟ್ಟ ಪುಟ್ಟ ಬ್ಯಾಟ್‍ಗಳ ಮೇಲೆ ಯಾವ ವರ್ಷದಲ್ಲಿ ಯಾವ ದೇಶದ ವಿರುದ್ಧ ಎಷ್ಟು ರನ್‍ಗಳನ್ನು ಸಚಿನ್‌ ಹೊಡೆದರು ಎಂದು ಕ್ರಮವಾಗಿ ದಾಖಲಿಸಲಾಗಿದೆ. ಈ ಮ್ಯೂಸಿಯಂಗೆ ಭೇಟಿ ಕೊಡುವ ಆಟಗಾರರು, ಮುಖ್ಯವಾಗಿ ಸಚಿನ್‍ಗೆ ಬೌಲಿಂಗ್ ಮಾಡಿದ ವಾಸಿಂ ಅಕ್ರಂ, ಬ್ರೆಟ್ ಲೀ, ಅಲನ್ ಡೊನಾಲ್ಡ್ ... ಮುಂತಾದ ಬೌಲರ್‌ಗಳು ಈ ಗೋಡೆಯ ಎದುರು ನಿಂತು ಅವರು ತಮ್ಮ ಯಾವ ಬಾಲ್‌ಗೆ ಎಷ್ಟು ರನ್‍ಗಳನ್ನು ಹೊಡೆದರು ಮತ್ತು ಆ ಆಟಗಳ ವೈಶಿಷ್ಟ್ಯವನ್ನು ನೆನೆಸಿಕೊಂಡಿದ್ದಾರೆ. ಅದಲ್ಲದೆ ಸಚಿನ್ ಬಳಸಿದ ವಸ್ತುಗಳೊಂದಿಗೆ, ಅವರ ಬೇರೆ ಬೇರೆ ಮ್ಯಾಚ್‍ಗಳ ಮತ್ತು ದಾಖಲೆಗಳ ದತ್ತಾಂಶವನ್ನೂ ಇಲ್ಲಿ ಪ್ರದರ್ಶಿಸಲಾಗಿದೆ.

ವಿವಿಧ ವಿಶ್ವಕಪ್‌ಗಳಲ್ಲಿ ಗೆದ್ದ ತಂಡಗಳ ಆಟಗಾರರ ಹಸ್ತಾಕ್ಷರ ಇರುವ ಬ್ಯಾಟ್‌ಗಳ ಸಂಗ್ರಹ

ಭಾರತದ ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ ಅವರ ಗ್ಯಾಲರಿಯೂ ಇಲ್ಲಿದೆ. ಅಲ್ಲಿ ಸಚಿನ್‍ನಂತೆಯೇ ಅವರು ಬಳಸಿದ ವಸ್ತುಗಳು, ಟಿ ಶರ್ಟ್‌ಗಳು, ಜರ್ಸಿಗಳು, ಅನೇಕ ದಾಖಲೆಗಳು, ಇತ್ಯಾದಿಗಳು ಇವೆ.

ಸುಮಾರು 500ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹಿಳಾ ಮತ್ತು ಪುರುಷ ಕ್ರಿಕೆಟ್ ಪಟುಗಳು ಈ ಮ್ಯೂಸಿಯಂಗೆ ಇಲ್ಲಿಯವರೆಗೆ ಭೇಟಿ ನೀಡಿದ್ದಾರೆ. ಪ್ರತಿದಿನ ನೂರಾರು ಆಸಕ್ತರು ಭೇಟಿ ನೀಡುತ್ತಾರೆ. ವಾರಾಂತ್ಯಕ್ಕೆ ಹೆಚ್ಚು ಜನರು ಭೇಟಿ ನೀಡುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಬರುತ್ತಾರೆ.

ಈ ಮ್ಯೂಸಿಯಂ ಜನಸಾಮಾನ್ಯರು ಮತ್ತು ಆಕಾಂಕ್ಷೆಯುಳ್ಳ ಆಟಗಾರರಿಗಷ್ಟೇ ಅಲ್ಲದೇ ಈಗಾಗಲೇ ಹೆಸರು ಮಾಡಿರುವ ಆಟಗಾರರಿಗೂ ದೇಗುಲವಿದ್ದಂತೆ. ಸಚಿನ್, ಸುನೀಲ್ ಗವಾಸ್ಕರ್ ಆಟವನ್ನು ನೋಡುತ್ತ ಹಲವು ಆಟಗಾರರು ಬೆಳೆದಿದ್ದಾರೆ. ವಿರಾಟ್‌ ಕೊಹ್ಲಿ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಅವರೆಲ್ಲ ಈ ಮ್ಯೂಸಿಯಂನಲ್ಲಿ ಏನೇನು ವಸ್ತುಗಳಿರಬೇಕೆಂದು ಸಲಹೆ ನೀಡುತ್ತಾರೆ. ಮಕ್ಕಳಷ್ಟೇ ಅಲ್ಲದೇ ನುರಿತ ಆಟಗಾರರೂ ಮ್ಯೂಸಿಯಂನಲ್ಲಿ ಪ್ರದರ್ಶಿತ ತಮ್ಮ ತಮ್ಮ ಹೀರೊಗಳ ವಸ್ತುಗಳನ್ನು ಸ್ಪರ್ಶಿಸಿ ಆನಂದಿಸುತ್ತಾರೆ. ಕೆಲವು ಆಟಗಾರರು ತಮ್ಮ ಮನೆಗೆ ಮರಳಿದ ನಂತರ ತಮ್ಮ ಕ್ರಿಕೆಟ್ ವಸ್ತುಗಳನ್ನು ಮ್ಯೂಸಿಯಂಗೆ ಕಳುಹಿಸುತ್ತಾರೆ.

ರೋಹನ್ ಅವರಿಗೆ ಈ ಮ್ಯೂಸಿಯಂ ಸ್ಥಾಪಿಸಲು ಸಾಕಷ್ಟು ಕಷ್ಟಗಳು ಎದುರಾಗಿದ್ದವು. ಆಟಗಾರರ ಹಸ್ತಾಕ್ಷರವನ್ನು ಸಂಗ್ರಹಿಸಿವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಹೋಟೆಲ್‍ಗಳ ಲಾಬಿಗಳಲ್ಲಿ ಆಟಗಾರರು ಈಗ ಹೊರಬರುವರೋ ಆಗ ಹೊರಬರುವರೋ ಎಂದು ಕಾಯುತ್ತ ನಿಂತು, ಕೆಲವೊಂದು ಬಾರಿ ಸೆಕ್ಯೂರಿಟಿಯಿಂದ ಬೈಯಿಸಿಕೊಂಡಾದರೂ ಸರಿ, ವಸ್ತುಗಳನ್ನು ಸಂಗ್ರಹಿಸಿ, ಮ್ಯೂಸಿಯಂ ಬೆಳೆಸಿದ್ದಾರೆ. ಅವರು ಪ್ರಪಂಚದ ಅತ್ಯಂತ ಹೆಚ್ಚು ಕ್ರಿಕೆಟ್ ಸಾಮಗ್ರಿಗಳ ವೈಯಕ್ತಿಕ ಸಂಗ್ರಹಕಾರರಲ್ಲಿ ಒಬ್ಬರಾಗಿದ್ದಾರೆ.

ನಟ ವೆಂಕಟ್, ಸುನಿಲ್ ಶೆಟ್ಟಿ, ಅನುಷ್ಕಾ ಶರ್ಮಾ, ರಿತೇಶ್ ದೇಶಮುಖ್ ಸೇರಿದಂತೆ ಹಲವು ಸೆಲೆಬ್ರಿಟಿಗಳೂ ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದಾರೆ. ಸೆಲೆಬ್ರಿಟಿ ಲೀಗ್ ಆಟಗಾರರು ಮತ್ತು ಕ್ರಿಕೆಟ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಜನರು ಕೂಡ ಮ್ಯೂಸಿಯಂಗೆ ಬಂದು ಮಾಹಿತಿ ಪಡೆದಿದ್ದಾರೆ.

ಗತಕಾಲದ ನೆನಪಿನಲ್ಲಿ ಸಚಿನ್‌ ತೆಂಡೂಲ್ಕರ್‌. ಜೊತೆಗೆ ಮ್ಯೂಸಿಯಂ ಸ್ಥಾಪಕ ರೋಹನ್‌ ಪಾಟೆ

ಈ ಮ್ಯೂಸಿಯಂ ವಿವಿಧ ವಯೋಮಾನದವರಿಗೆ ವಿವಿಧ ರೀತಿಯಿಂದ ಪ್ರೇರಣೆ ನೀಡುತ್ತದೆ. ಕ್ರಿಕೆಟ್ ಪ್ರೇಮಿಗಳಾದ ಶಾಲಾ ಮಕ್ಕಳು ಮತ್ತು ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಇದೊಂದು ತೀರ್ಥಕ್ಷೇತ್ರವಾಗಿದೆ. ಒಬ್ಬ ಹುಡುಗನಿಗೆ ಸಚಿನ್‍ ಬಳಸಿದ ಬ್ಯಾಟ್ ಹಿಡಿಯಲು ಕೊಟ್ಟಾಗ ಅವನು ಇಡೀ ದಿನ ಕೈ ತೊಳೆಯಲಿಲ್ಲವಂತೆ. ಇನ್ನೊಂದು ಶಾಲಾ ವಿದ್ಯಾರ್ಥಿ ಹತ್ತು ವರ್ಷಗಳ ನಂತರ ತನ್ನ ಟೀ ಶರ್ಟ್‌ ಕೂಡ ಇಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಆತ್ಮವಿಶ್ವಾಸದಿಂದ ಹೇಳಿದನಂತೆ!

ನಮ್ಮಲ್ಲಿ ಮ್ಯೂಸಿಯಂ ಎಂಬ ಪರಿಕಲ್ಪನೆ ಈಗೀಗ ಜನಪ್ರಿಯವಾಗುತ್ತಿದೆ. ಹೊರ ದೇಶಗಳಲ್ಲಿ ಇದು ಸಾಮಾನ್ಯ. ಮ್ಯೂಸಿಯಂ ಪರ್ಯಟನೆ ಈಗ ಹೆಚ್ಚು ಹೆಚ್ಚು ಬೆಳೆಯುತ್ತಿದೆ.

‘ಬ್ಲೇಡ್ಸ್ ಆಫ್ ಗ್ಲೋರಿ’ ಹಿರಿಯರಿಂದ ಕಿರಿಯರವರೆಗೆ ಮತ್ತು ನುರಿತ ಆಟಗಾರರಿಂದ ಹಿಡಿದು ಗಲ್ಲಿ ಕ್ರಿಕೆಟ್ ಆಟಗಾರರವರೆಗೆ ಎಲ್ಲರಿಗೂ ಪ್ರೇರಣೆ ನೀಡುತ್ತದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.