ADVERTISEMENT

Asia Cup 2023 PAK vs SL: ಪಾಕ್ ವಿರುದ್ಧ ರೋಚಕ ಜಯ, ಫೈನಲ್‌ಗೆ ಶ್ರೀಲಂಕಾ

ಪಿಟಿಐ
Published 14 ಸೆಪ್ಟೆಂಬರ್ 2023, 19:55 IST
Last Updated 14 ಸೆಪ್ಟೆಂಬರ್ 2023, 19:55 IST
<div class="paragraphs"><p>ಶ್ರೀಲಂಕಾ ತಂಡದ ಆಟಗಾರರ ಸಂಭ್ರಮ</p></div>

ಶ್ರೀಲಂಕಾ ತಂಡದ ಆಟಗಾರರ ಸಂಭ್ರಮ

   

–ಎಎಫ್‌ಪಿ ಚಿತ್ರ

ಕೊಲಂಬೊ: ಕೊನೆಯ ಕ್ಷಣದಲ್ಲಿ ಆತಂಕ ಎದುರಿಸಿದರೂ ಶ್ರೀಲಂಕಾ ತಂಡ ಅಂತಿಮ ಎಸೆತದಲ್ಲಿ ಜಯ ಗಳಿಸಿತು. ಏಷ್ಯಾ ಕಪ್ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿ, ಫೈನಲ್‌ ತಲುಪಿತು.

ADVERTISEMENT

ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಶ್ರೀಲಂಕಾ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿವೆ.

ಕುಶಾಲ್‌ ಮೆಂಡಿಸ್‌ (91;87ಎ, 4X8, 6X1), ಸದೀರ ಸಮರವಿಕ್ರಮ (48; 54, 4X4) ಅವರು ಮಧ್ಯಮ ಕ್ರಮಾಂಕದಲ್ಲಿ ಲಂಕಾ ಪಡೆಗೆ ಬಲ ಒದಗಿಸಿದರೂ ಕೊನೆಯ ಹಂತದಲ್ಲಿ ಆತಂಕ ಎದುರಿಸಿತು. ಈ ಹಂತದಲ್ಲಿ ಚರಿತ ಅಸಲಂಕಾ (49; 47ಎ, 4X3, 6X1) ಔಟಾಗದೆ ದಿಟ್ಟ ಹೋರಾಟ ನಡೆಸಿದರು. ಕೊನೆಯ ಎರಡು ಎಸೆತದಲ್ಲಿ ಆರು ರನ್‌ ಬೇಕಿದ್ದಾಗ 4, 2 ರನ್‌ ಗಳಿಸಿ ಗೆಲುವು ಗಡಿ ದಾಟಿಸಿದರು.

ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮೊಹಮ್ಮದ್ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಅವರ ಅರ್ಧಶತಕಗಳ ಬಲದಿಂದ 42 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 252 ರನ್‌ ಗಳಿಸಿತು.

ಈ ಸವಾಲಿನ ರನ್‌ ಬೆನ್ನು ಹತ್ತಿದ ಶ್ರೀಲಂಕಾ 42 ಓವರ್‌ಗಳಲ್ಲಿ 8 ವಿಕೆಟ್‌ಗೆ 252 ರನ್‌ ಗಳಿಸಿತು. ಆರಂಭಿಕ ಆಟಗಾರರಾದ ಪಥುಮ್ ನಿಸ್ಸಾಂಕ (29) ಮತ್ತು ಕುಶಾಲ್‌ ಪೆರೆರಾ (17) ಬೇಗ ಔಟಾದರೂ ಮೂರನೇ ವಿಕೆಟ್‌ಗೆ ಕುಶಾಲ್‌ ಮೆಂಡಿಸ್‌ ಮತ್ತು ಸದೀರ ಸಮರವಿಕ್ರಮ ಅವರು 100 ರನ್‌ಗಳ ಜೊತೆಯಾಟ ನೀಡಿ, ತಂಡಕ್ಕೆ ಆಸರೆಯಾದರು. ಇಫ್ತಿಕಾರ್ ಅಹಮದ್ 3, ಶಾಹೀನ್ ಶಾ ಆಫ್ರಿದಿ ಎರಡು ವಿಕೆಟ್‌ ಪಡೆದರು.

ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಐದನೇ ಓವರ್‌ನಲ್ಲಿಯೇ ಅನುಭವಿ ಬ್ಯಾಟರ್ ಫಕರ್ ಜಮಾನ್ ವಿಕೆಟ್ ಉರುಳಿಸಿದ ಲಂಕಾ ಬೌಲರ್ ಪ್ರಮೋದ ಮಧುಶಾನ ಸಂಭ್ರಮಿಸಿದರು. ಇನ್ನೊಂದು ಬದಿಯಲ್ಲಿದ್ದ ಅಬ್ದುಲ್ಲಾ ಶಫೀಕ್ (52; 69ಎ, 4X3, 6X2) ಅವರು ನಾಯಕ ಬಾಬರ್ ಆಜಂ (29) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ ಸೇರಿಸಿದರು.

16ನೇ ಓವರ್‌ನಲ್ಲಿ ಆಜಂ ವಿಕೆಟ್ ಗಳಿಸಿದ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಜೊತೆಯಾಟವನ್ನು ಮುರಿದರು. ಆಗ ಕ್ರೀಸ್‌ಗೆ ಬಂದ ರಿಜ್ವಾನ್ (ಅಜೇಯ 86; 73ಎ, 4X6, 6X2) ಇನಿಂಗ್ಸ್‌ಗೆ ಬಲ ತುಂಬಿದರು. ತಂಡದ ಮೊತ್ತವು 100ರ ಗಡಿ ಮುಟ್ಟಿದಾಗ ಶಫೀಕ್ ವಿಕೆಟ್ ಪಥಿರಾಣ ಪಾಲಾಯಿತು. ‌

ಮೊಹಮ್ಮದ್ ಹ್ಯಾರಿಸ್ ಹೀಗೆ ಬಂದು ಹಾಗೆ ಹೋದರು. ಪಥಿರಾಣಗೆ ವಿಕೆಟ್‌ ಒಪ್ಪಿಸಿದರು. ಮೊಹಮ್ಮದ್ ನವಾಜ್ (12 ರನ್) ಕೂಡ ಔಟಾದರು. ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿ ಪಾಕ್ ತಂಡಕ್ಕೆ ರಿಜ್ವಾನ್ ಆಸರೆಯಾದರು. ಅವರಿಗೆ ಇಫ್ತಿಕಾರ್ ಅಹಮದ್ (47; 40ಎ, 4X4, 6X2) ಉತ್ತಮ ಜೊತೆ ನೀಡಿದರು. ಇಬ್ಬರೂ ಸೇರಿ ಆರನೇ ವಿಕೆಟ್ ಜೊತೆಯಾಟದಲ್ಲಿ 108 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 42 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 252 (ಅಬ್ದುಲ್ಲಾ ಶಫೀಕ್ 52, ಬಾಬರ್ ಆಜಂ 29, ಮೊಹಮ್ಮದ್ ರಿಜ್ವಾನ್ ಔಟಾಗದೆ 86, ಇಫ್ತಿ ಕಾರ್ ಅಹಮದ್ 47; ಪ್ರಮೋದ್ ಮಧುಶಾನ 58ಕ್ಕೆ2, ಮಥೀಷ ಪಥಿರಾಣ 65ಕ್ಕೆ3) ಶ್ರೀಲಂಕಾ (ನಿಸ್ಸಾಂಕ 29, ಸದೀರ 48, ಕುಶಾಲ್‌ ಮೆಂಡಿಸ್‌ 91)

ಫಲಿತಾಂಶ: ಶ್ರೀಲಂಕಾ ತಂಡಕ್ಕೆ ಎರಡು ವಿಕೆಟ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.