ADVERTISEMENT

Ind vs Sl T20: ಶ್ರೀಲಂಕಾ ಎದುರು ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ

ಪಿಟಿಐ
Published 29 ಜುಲೈ 2021, 18:05 IST
Last Updated 29 ಜುಲೈ 2021, 18:05 IST
ಶಿಖರ್ ಧವನ್‌ ಅವರನ್ನು ಔಟ್‌ ಮಾಡಿ ಸಂಭ್ರಮಿಸಿದ ದುಷ್ಮಂತ ಚಾಮಿರಾ –ಎಎಫ್‌ಪಿ ಚಿತ್ರ
ಶಿಖರ್ ಧವನ್‌ ಅವರನ್ನು ಔಟ್‌ ಮಾಡಿ ಸಂಭ್ರಮಿಸಿದ ದುಷ್ಮಂತ ಚಾಮಿರಾ –ಎಎಫ್‌ಪಿ ಚಿತ್ರ   

ಕೊಲಂಬೊ: ಶಿಖರ್ ಧವನ್ ನಾಯಕತ್ವದ ಭಾರತ ತಂಡವು ಗುರುವಾರ ಕಳಪೆ ಬ್ಯಾಟಿಂಗ್‌ನಿಂದಾಗಿ ಅಲ್ಪ ಮೊತ್ತ ಗಳಿಸಿತು.

ಶ್ರೀಲಂಕಾದ ಲೆಗ್‌ಸ್ಪಿನ್ನರ್ ವಾಣಿಂದು ಹಸರಂಗಾ (4–0–9–4) ಅವರ ಅಮೋಘ ಬೌಲಿಂಗ್‌ ಮುಂದೆ ಭಾರತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 81 ರನ್ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ (14 ರನ್), ಭುವನೇಶ್ವರ್ ಕುಮಾರ್ (16) ಮತ್ತು ಕುಲದೀಪ್ ಯಾದವ್ (ಔಟಾಗದೆ 23) ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ಮುಟ್ಟಲಿಲ್ಲ.

ADVERTISEMENT

ನಾಯಕ ಶಿಖರ್ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ದುಷ್ಮಂತ ಚಾಮೀರಾ ಬೌಲಿಂಗ್‌ನಲ್ಲಿ ಔಟಾದರು. ಖಾತೆಯನ್ನೂ ತೆರೆಯಲಿಲ್ಲ.

ಕರ್ನಾಟಕದ ದೇವದತ್ತ ಪಡಿಕ್ಕಲ್ (9 ರನ್) ನಾಲ್ಕನೇ ಓವರ್‌ನಲ್ಲಿ ಆಟ ಮುಗಿಸಿದರು. 36 ರನ್‌ಗಳು ಸೇರುವಷ್ಟರಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಯಾಗಿತ್ತು. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು.

ಋತುರಾಜ್, ಸಂಜು ಸ್ಯಾಮ್ಸನ್, ಭುವನೇಶ್ವರ್ ಕುಮಾರ್ ಮತ್ತು ವರುಣ್ ಚಕ್ರವರ್ತಿ ಅವರ ವಿಕೆಟ್‌ಗಳನ್ನು ಹಸರಂಗಾ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಆದರೆ ತಂಡವನ್ನು ಆಲೌಟ್ ಆಗದಂತೆ ತಡೆಯುವಲ್ಲಿ ಭುವನೇಶ್ವರ್ ಮತ್ತು ಕುಲದೀಪ್ ಪ್ರಮುಖ ಪಾತ್ರ ವಹಿಸಿದರು.

ಚೈನಾಮನ್ ಬೌಲರ್ ಕುಲದೀಪ್ 28 ಎಸೆತಗಳನ್ನು ಎದುರಿಸಿದರು. ಭುವಿ 32 ಎಸೆತಗಳನ್ನು ಆಡಿದರು. ಲಂಕಾ ಬೌಲರ್‌ಗಳನ್ನು ಧೈರ್ಯದಿಂದ ಎದುರಿಸಿದರು.

ಏಕದಿನ ಸರಣಿಯಲ್ಲಿ ಸೋತಿದ್ದ ಶ್ರೀಲಂಕಾ ತಂಡವು ಟಿ20 ಸರಣಿಯಲ್ಲಿ ಜಯಿಸುವ ಛಲದಲ್ಲಿದೆ. ಎರಡನೇ ಪಂದ್ಯದಲ್ಲಿಯೂ ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್‌ನಿಂದ ಭಾರತ ತಂಡವನ್ನು ಸೋಲಿಸಿ ಸರಣಿಯಲ್ಲಿ 1–1ರ ಸಮಬಲ ಸಾಧಿಸಿದ್ದರು.

ಈ ಪಂದ್ಯದಲ್ಲಿಯೂ ತಮ್ಮ ಸ್ಪಿನ್ ಬೌಲರ್‌ಗಳ ಬಲದಿಂದ ಭಾರತ ತಂಡವು ನೂರರ ಗಡಿಯನ್ನು ದಾಟದಂತೆ ಶ್ರೀಲಂಕಾ ನೋಡಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.