ADVERTISEMENT

ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಕ್ರಿಕೆಟ್‌ ಮಂಡಳಿ ವಜಾ ಆದೇಶ ವಾಪಸ್

ಏಜೆನ್ಸೀಸ್
Published 12 ಡಿಸೆಂಬರ್ 2023, 14:11 IST
Last Updated 12 ಡಿಸೆಂಬರ್ 2023, 14:11 IST
<div class="paragraphs"><p>ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಲೋಗೊ</p></div>

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಲೋಗೊ

   

ಕೊಲಂಬೊ: ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ದೇಶದ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿರುವ ಆದೇಶವನ್ನು ಶ್ರೀಲಂಕಾದ ಕ್ರೀಡಾ ಸಚಿವ ಹರಿನ್‌ ಫೆರ್ನಾಂಡೊ ಮಂಗಳವಾರ ಹಿಂದಕ್ಕೆ ಪಡೆದಿದ್ದಾರೆ. ‌

ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ತಡೆಯಲು ವಿಫಲವಾಗಿದೆ ಎಂಬ ಕಾರಣಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಆ ದೇಶದ ಕ್ರಿಕೆಟ್‌ ಮಂಡಳಿಯನ್ನು (ಎಸ್‌ಎಲ್‌ಸಿ) ಅಮಾನತ್ತುಗೊಳಿಸಿತ್ತು. ಸಚಿವ ಫೆರ್ನಾಂಡೊ ಅವರ ಈ ನಿರ್ಧಾರದಿಂದ ಅಮಾನತು ಆದೇಶ ವಾಪಸ್‌ ಪಡೆಯಲು ಐಸಿಸಿಗೆ ಹಾದಿ ಸುಗಮವಾದಂತಾಗಿದೆ.

ADVERTISEMENT

‘ಅಮಾನತು ಆದೇಶವನ್ನು ಐಸಿಸಿ ಹಿಂಪಡೆಯಲಿ ಎಂಬ ಉದ್ದೇಶದಿಂದ ಶ್ರೀಲಂಕಾ ಕ್ರಿಕೆಟ್‌ ಮಧ್ಯಂತರ ಸಮಿತಿ ನೇಮಿಸುವ ನಿರ್ಧಾರವನ್ನು ಹಿಂಪಡೆಯುವ ರಾಜ್ಯಪತ್ರಕ್ಕೆ ಸಹಿ ಹಾಕಿದ್ದೇನೆ’ ಎಂದು ಫರ್ನಾಂಡೊ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಐಸಿಸಿ ತಕ್ಷಣಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. 

ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ದೇಶದ ಮಂಡಳಿಯನ್ನು ಕ್ರೀಡಾ ಸಚಿವರಾಗಿದ್ದ ರೋಷನ್ ರಣಸಿಂಘೆ ವಜಾಗೊಳಿಸಿ ಅರ್ಜುನ ರಣತುಂಗ ನೇತೃತ್ವದಲ್ಲಿ ಮಧ್ಯಂತರ ಸಮಿತಿ ನೇಮಕ ಮಾಡಿದ್ದರು. ಮರು ದಿನವೇ ಅಲ್ಲಿನ ಮೇಲ್ಮನವಿ ನ್ಯಾಯಾಲಯ ಇದಕ್ಕೆ ತಡೆ ನೀಡಿ ಹಳೆಯ ಮಂಡಳಿಗೇ ಅಧಿಕಾರ ವಹಿಸಿಕೊಟ್ಟಿತ್ತು.

ನಂತರದ ಬೆಳವಣಿಗೆಯಲ್ಲಿ ರಣಸಿಂಘೆ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಮಂಡಳಿ ವಜಾ ಆದೇಶ ಹಿಂಪಡೆಯಬೇಕೆಂಬ, ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಒತ್ತಾಯಕ್ಕೆ ರಣಸಿಂಘೆ ಮಣಿದಿರಲಿಲ್ಲ. ಕ್ರಿಕೆಟ್‌ ಮಂಡಳಿಯನ್ನು ಶುದ್ಧೀಕರಿಸುವ ತಮ್ಮ ಯತ್ನಕ್ಕೆ ಅಧ್ಯಕ್ಷರೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದ ರಣಸಿಂಘೆ, ನಡುರಸ್ತೆಯಲ್ಲೇ ತಮ್ಮ ಹತ್ಯೆ ನಡೆದರೆ ಅದಕ್ಕೆ ಅಧ್ಯಕ್ಷ ಮತ್ತು ಸೇನೆಯ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದೂ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.