ADVERTISEMENT

ಭಾರತ –ಶ್ರೀಲಂಕಾ ಟಿ20 ಪಂದ್ಯ ಇಂದು: ಯುವಪ್ರತಿಭೆಗಳ ಪ್ರಯೋಗಕ್ಕೆ ವೇದಿಕೆ

ಲಖನೌನಲ್ಲಿ ಭಾರತ –ಶ್ರೀಲಂಕಾ ಟಿ20 ಪಂದ್ಯ ಇಂದು: ಪ್ರವಾಸಿ ಬಳಗದ ಮುಂದೆ ಕಠಿಣ ಸವಾಲು

ಪಿಟಿಐ
Published 23 ಫೆಬ್ರುವರಿ 2022, 20:53 IST
Last Updated 23 ಫೆಬ್ರುವರಿ 2022, 20:53 IST
ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ 
ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್    

ಲಖನೌ: ಇದೇ ವರ್ಷ ನಡೆಯಲಿರುವ ಟ್ವೆಂಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸಿದ್ಧತೆಯ ಭಾಗವಾಗಿ ಪ್ರಯೋಗ ಮಾಡಲು ಭಾರತಕ್ಕೆ ಮತ್ತೊಂದು ಅವಕಾಶ ಲಭಿಸಿದೆ.

ಗುರುವಾರ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಕೆಲವು ಹೊಸಪ್ರತಿಭೆಗಳನ್ನು ಕಣಕ್ಕಿಳಿಸಲು ಆತಿಥೇಯ ತಂಡವು ಸಿದ್ಧವಾಗಿದೆ. ಈಚೆಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ 3–0ಯಿಂದ ಕ್ಲೀನ್ ಸ್ವೀಪ್ ವಿಜಯ ಸಾಧನೆ ಮಾಡಿದ್ದ ರೋಹಿತ್ ಶರ್ಮಾ ಬಳಗವು ಈಗ ದಸುನ್ ಶನಕಾ ಪಡೆಯನ್ನು ಎದುರಿಸಲಿದೆ.

ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜ ತಂಡಕ್ಕೆ ಮರಳಿದ್ದಾರೆ. ದೀರ್ಘ ಕಾಲದಿಂದ ಗಾಯದ ಸಮಸ್ಯೆ, ಶಸ್ತ್ರಚಿಕಿತ್ಸೆ ಮತ್ತು ಆರೈಕೆ ನಂತರ ಅವರು ಕಣಕ್ಕಿಳಿಯಲಿದ್ದಾರೆ. ಆದರೆ, ಮಧ್ಯಮಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಾಹರ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ವಿರಾಟ್ ಕೊಹ್ಲಿ, ರಿಷಭ್ ಪಂತ್ ಕೂಡ ವಿಶ್ರಾಂತಿ ಪಡೆದಿದ್ದಾರೆ. ಕೆ.ಎಲ್. ರಾಹುಲ್ ಕೂಡ ತಂಡದಲ್ಲಿಲ್ಲ.

ADVERTISEMENT

ಇದರಿಂದಾಗಿ ಯುವಪ್ರತಿಭೆಗಳಿಗೆ ಹೆಚ್ಚು ಅವಕಾಶಗಳು ಲಭಿಸುವ ಸಾಧ್ಯತೆ ಇದೆ. ವಿಕೆಟ್‌ಕೀಪರ್ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಬ್ಯಾಟರ್ ಋತುರಾಜ್ ಗಾಯಕವಾಡ ಅವರಿಗೆ ತಮ್ಮ ಪ್ರತಿಭೆ ತೋರುವ ಅವಕಾಶ ಸಿಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುವುದು ಖಚಿತ.

ಮ್ಯಾಚ್ ಫಿನಿಷರ್ ಆಗಿ ರೂಪುಗೊಳ್ಳುತ್ತಿರುವ ವೆಂಕಟೇಶ್ ಅಯ್ಯರ್ ಆಡುವರು. ಸ್ಪಿನ್ನರ್ ರವಿ ಬಿಷ್ಣೋಯಿ, ವೇಗಿ ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಬೌಲಿಂಗ್‌ನಲ್ಲಿಯೂ ವೆಂಕಟೇಶ್ ಜೊತೆ ನೀಡುವರು.

ಲಂಕಾ ತಂಡದಲ್ಲಿ ಅನುಭವಿಗಳ ಕೊರತೆ ಇದೆ. ಲಂಕಾ ತಂಡವು 1–4ರಿಂದ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಸೋತು ಇಲ್ಲಿಗೆ ಬಂದಿದೆ.

ಈಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತ ಗಳಿಸಿರುವ ಖುಷಿಯಲ್ಲಿರುವ ವಣಿಂದು ಹಸರಂಗಾ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ), ಜಸ್‌ಪ್ರೀತ್ ಬೂಮ್ರಾ (ಉಪನಾಯಕ), ಋತುರಾಜ್ ಗಾಯಕವಾಡ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್.

ಶ್ರೀಲಂಕಾ: ದಸುನ್ ಶನಕಾ (ನಾಯಕ),ಚರಿತ ಅಸ್ಲಂಕಾ (ಉಪನಾಯಕ), ಪಥುಮ್ ನಿಸಾಂಕ, ಕುಶಾಲ ಮೆಂಡಿಸ್, ದಿನೇಶ್ ಚಾಂಡಿಮಲ್, ಧನುಷ್ಕಾ ಗುಣತಿಲಕ, ಕಮಿಲ್ ಮಿಶ್ರಾ, ಜೆನಿತ್ ಲಿಯಾಂಗೆ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಾಮೀರಾ, ಲಾಹಿರು ಕುಮಾರ, ಬಿನುರಾ ಫರ್ನಾಂಡೊ, ಶಿರನ್ ಫರ್ನಾಂಡೊ, ಮಹೀಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ ಜಯವಿಕ್ರಮ, ಆಶಿಯನ್ ಡೆನಿಯಲ್.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.