ADVERTISEMENT

Asia Cup ಪ್ರಶಸ್ತಿಗಾಗಿ ಸೆಣಸಾಟ: ಲಂಕಾ ಎದುರು ಟಾಸ್ ಗೆದ್ದ ಪಾಕ್ ಬೌಲಿಂಗ್ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2022, 14:09 IST
Last Updated 11 ಸೆಪ್ಟೆಂಬರ್ 2022, 14:09 IST
ಪಾಕಿಸ್ತಾನ ನಾಯಕ ಬಾಬರ್‌ ಅಜಂ ಹಾಗೂ ಶ್ರೀಲಂಕಾ ನಾಯಕ ದಸುನ್‌ ಶನಕ (ಚಿತ್ರಕೃಪೆ: ಟ್ವಿಟರ್‌ @OfficialSLC)
ಪಾಕಿಸ್ತಾನ ನಾಯಕ ಬಾಬರ್‌ ಅಜಂ ಹಾಗೂ ಶ್ರೀಲಂಕಾ ನಾಯಕ ದಸುನ್‌ ಶನಕ (ಚಿತ್ರಕೃಪೆ: ಟ್ವಿಟರ್‌ @OfficialSLC)   

ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ. ಟಾಸ್‌ ಗೆದ್ದಿರುವ ಪಾಕ್‌ ತಂಡದ ನಾಯಕ ಬಾಬರ್‌ ಅಜಂ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ ಭಾರತ (7) ಹೊರತುಪಡಿಸಿದರೆ ಅತಿಹೆಚ್ಚು (5) ಬಾರಿ ಪ್ರಶಸ್ತಿ ಗೆದ್ದ ತಂಡ ಎನಿಸಿರುವ ಲಂಕಾ ಆರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.ಪಾಕಿಸ್ತಾನ ಕೂಡ ಮೂರೇ ಬಾರಿಗೆ ಫೈನಲ್‌ ಗೆಲ್ಲುವ ಆಲೋಚನೆಯಲ್ಲಿದೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದಾಗಿದೆ.

ಇದುಲಂಕಾ ತಂಡಕ್ಕೆ 12ನೇ ಮತ್ತು ಪಾಕ್‌ ಪಡೆಗೆ 5ನೇ ಫೈನಲ್‌ ಪಂದ್ಯವಾಗಿದೆ.

ADVERTISEMENT

ಈ ತಂಡಗಳುಶುಕ್ರವಾರ ನಡೆದ ‘ಸೂಪರ್‌ 4’ ಹಂತದ ಕೊನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶ್ರೀಲಂಕಾ ಐದು ವಿಕೆಟ್‌ ಅಂತರದ ಜಯ ದಾಖಲಿಸಿತ್ತು.

ಲಂಕಾ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದಾರೆ. ಕುಸಾಲ್‌ ಮೆಂಡಿಸ್‌ ಮತ್ತು ಪಥುಮ್‌ ನಿಸಾಂಕ ಉತ್ತಮ ಆರಂಭ ನೀಡುತ್ತಿದ್ದಾರೆ. ಧನುಷ್ಕಾ ಗುಣತಿಲಕ, ಭಾನುಕ ರಾಜಪಕ್ಸ ಮತ್ತು ದಸುನ್‌ ಶನಕ ಅವರು ಆ ಬಳಿಕ ಇನಿಂಗ್ಸ್‌ಗೆ ಬಲ ತುಂಬುವ ವಿಶ್ವಾಸದಲ್ಲಿದ್ದಾರೆ.

ಇನ್ನೊಂದೆಡೆ ನಾಯಕ ಬಾಬರ್ ಅಜಂ ಈ ಟೂರ್ನಿಯಲ್ಲಿ ಲಯ ಕಂಡುಕೊಳ್ಳದೇ ಇರುವುದು ಪಾಕಿಸ್ತಾನಕ್ಕೆ ಚಿಂತೆಯಾಗಿದೆ. ಆದರೆ ಮೊಹಮ್ಮದ್ ರಿಜ್ವಾನ್‌ ಮತ್ತು ಮೊಹಮ್ಮದ್‌ ನವಾಜ್‌ ಎದುರಾಳಿ ಬೌಲಿಂಗ್‌ ದಾಳಿಯ ದಿಕ್ಕುತಪ್ಪಿಸುವ ತಾಕತ್ತು ಹೊಂದಿದ್ದಾರೆ.

ಪಾಕ್‌ ತಂಡದ ಬಲ ಬೌಲಿಂಗ್‌ ವಿಭಾಗದಲ್ಲಿ ಅಡಗಿದೆ. ನಸೀಮ್‌ ಶಾ, ಹ್ಯಾರಿಸ್‌ ರವೂಫ್‌ ಮತ್ತು ಮೊಹಮ್ಮದ್‌ ಹಸನೈನ್‌ ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಸ್ಪಿನ್ನರ್‌ಗಳಾದ ಶಾದಾಬ್‌ ಖಾನ್‌ ಮತ್ತು ಮೊಹಮ್ಮದ್‌ ನವಾಜ್‌ ಅವರೂ ರನ್‌ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಡುವ ಹನ್ನೊಂದರ ಬಳಗ
ಶ್ರೀಲಂಕಾ:ದಸುನ್‌ ಶನಕ (ನಾಯಕ), ಧನುಷ್ಕಾ ಗುಣತಿಲಕ, ಪಥುಮ್‌ ನಿಸಾಂಕ, ಕುಸಾಲ್‌ ಮೆಂಡಿಸ್, ಭಾನುಕ ರಾಜಪಕ್ಸ, ವನಿಂದು ಹಸರಂಗ, ಚಮಿಕ ಕರುಣರತ್ನೆ, ಮಹೀಶ ತೀಕ್ಷಣ,ದಿಲ್ಶನ್ ಮಧುಶನಕ, ಧನಂಜಯ ಡಿ ಸಿಲ್ವ, ಪ್ರಮೋದ್ ಮದುಶಾನ್

ಪಾಕಿಸ್ತಾನ: ಬಾಬರ್ ಆಜಂ (ನಾಯಕ),ಮೊಹಮ್ಮದ್ ರಿಜ್ವಾನ್,ಫಖ್ರ್‌ ಜಮಾನ್, ಇಫ್ತಿಕರ್‌ ಅಹ್ಮದ್‌, ಕುಶ್‌ದಿಲ್‌ ಶಾ,ಮೊಹಮ್ಮದ್ ನವಾಜ್,ಶಾದಾಬ್‌ ಖಾನ್‌,ಆಸಿಫ್ ಅಲಿ,ಹ್ಯಾರಿಸ್ ರವೂಫ್,ನಸೀಮ್‌ ಶಾ,ಮೊಹಮ್ಮದ್ ಹಸನೈನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.