ADVERTISEMENT

IPL ಸಲುವಾಗಿ ಪಾಕಿಸ್ತಾನ ಲೀಗ್‌ನಿಂದ ಹಿಂದೆ ಸರಿದ ಆಟಗಾರನಿಗೆ PCB ನೋಟಿಸ್

ಪಿಟಿಐ
Published 17 ಮಾರ್ಚ್ 2025, 9:53 IST
Last Updated 17 ಮಾರ್ಚ್ 2025, 9:53 IST
<div class="paragraphs"><p>ಐಪಿಎಲ್‌ ಹಾಗೂ ಪಿಎಸ್‌ಎಲ್‌ ಲೋಗೊ</p></div>

ಐಪಿಎಲ್‌ ಹಾಗೂ ಪಿಎಸ್‌ಎಲ್‌ ಲೋಗೊ

   

ಚಚಿತ್ರಕೃಪೆ: X – @IPL, @thePSLt20

ಲಾಹೋರ್‌: ಮಂಡಳಿಯ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕಾರ್ಬಿನ್‌ ಬೋಚ್‌ ಅವರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ನೋಟಿಸ್‌ ನೀಡಿದೆ.

ADVERTISEMENT

ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್‌ಎಲ್‌) 10ನೇ ಆವೃತ್ತಿಯು ಏಪ್ರಿಲ್‌ 11ರಂದು ಲಾಹೋರ್‌ನಲ್ಲಿ ಆರಂಭವಾಗಲಿದೆ. ಟೂರ್ನಿಯಲ್ಲಿ ಆಡುವ ಪೇಶಾವರ ಝಲ್ಮಿ ತಂಡವು ಬೋಚ್‌ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇದೀಗ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಮುಂಬೈ ಇಂಡಿಯನ್ಸ್‌ ಘೋಷಿಸಿದೆ. ದಕ್ಷಿಣ ಆಫ್ರಿಕಾದವರೇ ಆದ ವೇಗಿ ಲಿಜಾಡ್‌ ವಿಲಿಯಮ್ಸ್‌ ಗಾಯಗೊಂಡಿರುವ ಕಾರಣ, ಬೋಚ್‌ ಅವರು ಬದಲಿ ಆಟಗಾರನಾಗಿ ತಂಡಕ್ಕೆ ಬರಲಿದ್ದಾರೆ ಎಂದು ಇದೇ ತಿಂಗಳ ಆರಂಭದಲ್ಲಿ ಪ್ರಕಟಿಸಿದೆ.

ಈ ಕಾರಣಕ್ಕಾಗಿ ಪಿಸಿಬಿಯು ಬೋಚ್‌ ಅವರಿಗೆ ಒಪ್ಪಂದ ಉಲ್ಲಂಘಿಸಿದ ಆರೋಪದಲ್ಲಿ ನೋಟಿಸ್‌ ನೀಡಿದ್ದು, ಪಿಎಸ್ಎಲ್‌ನಿಂದ ಹಿಂದೆ ಸರಿಯುತ್ತಿರುವುದಕ್ಕೆ ಸಮರ್ಥನೆ ಕೇಳಿದೆ.

ಟೂರ್ನಿಯಿಂದ ಹೊರನಡೆಯುತ್ತಿರುವುದರಿಂದ ಆಗುವ ಪರಿಣಾಮದ ಬಗ್ಗೆಯೂ ವಿವರಿಸಿದ್ದು, ನಿಗದಿತ ಸಮಯದೊಳಗೆ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದೆ.

ಆಲ್‌ರೌಂಡರ್‌ ಬೋಚ್‌ ಅವರು, 2024ರ ಅಂತ್ಯದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ ಸರಣಿ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಎಂಬುದು ವಿಶೇಷ.

18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್‌ 22ರಂದು ಆರಂಭವಾಗಲಿದೆ. ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್‌‌ ಸೆಣಸಾಟ ನಡೆಸಲಿವೆ.

ಪಿಎಸ್‌ಎಲ್‌ ಹಾಗೂ ಐಪಿಎಲ್‌ ಟೂರ್ನಿಯ ಹಲವು ಪಂದ್ಯಗಳು ಈ ಬಾರಿ ಏಕಕಾಲದಲ್ಲಿ ನಡೆಯುತ್ತಿವೆ. ಈ ರೀತಿ ಆಗುತ್ತಿರುವುದು ಇದೇ ಮೊದಲು.

2016ರಲ್ಲಿ ಆರಂಭವಾದ ಪಿಎಸ್‌ಎಲ್‌ ಟೂರ್ನಿಯು ಸಾಮಾನ್ಯವಾಗಿ ಫೆಬ್ರುವರಿ–ಮಾರ್ಚ್‌ನಲ್ಲಿ ಆಯೋಜನೆಗೊಳ್ಳುತ್ತಿತ್ತು. ಆದರೆ, ಇತ್ತೀಚೆಗೆ ತನ್ನದೇ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಗಳ ಕಾರಣದಿಂದಾಗಿ ಪಿಸಿಬಿಯು ಈ ಟೂರ್ನಿಯನ್ನು ಏಪ್ರಿಲ್‌–ಮೇಗೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.