ADVERTISEMENT

468 ದಿನಗಳ ಬಳಿಕ 23 ಎಸೆತಗಳಲ್ಲಿ ಫಿಫ್ಟಿ;ವಿಶ್ವಕಪ್‌ ಮುನ್ನ ಲಯಕ್ಕೆ ಮರಳಿದ ಸೂರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2026, 2:53 IST
Last Updated 24 ಜನವರಿ 2026, 2:53 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

(ಪಿಟಿಐ ಚಿತ್ರ)

ರಾಯಪುರ: ಭಾರತೀಯ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಬರೋಬ್ಬರಿ 468 ದಿನಗಳ ಬಳಿಕ ಸೂರ್ಯ ಬ್ಯಾಟ್‌ನಿಂದ ಅರ್ಧಶತಕ ದಾಖಲಾಗಿದೆ. ಆ ಮೂಲಕ ತವರಿನಲ್ಲಿ ಸಾಗಲಿರುವ ಬಹುನಿರೀಕ್ಷಿತ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೂ ಮುನ್ನ ಲಯಕ್ಕೆ ಮರಳಿದ್ದಾರೆ.

ಕಿವೀಸ್ ಸರಣಿ ಆರಂಭಕ್ಕೂ ಮುನ್ನ ಸೂರ್ಯ ಬ್ಯಾಟಿಂಗ್ ಲಯದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೇಗನೇ ನಿರ್ಗಮಿಸಿದರೂ ಆಗಲೇ ಲಯಕ್ಕೆ ಮರಳುವ ಸೂಚನೆಯನ್ನು ನೀಡಿದ್ದರು. ಎರಡನೇ ಪಂದ್ಯದಲ್ಲೀಗ ಅರ್ಧಶತಕ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

209 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಆರು ರನ್ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆ ಇಶಾನ್ ಕಿಶನ್ ಜೊತೆಗೂಡಿದ ಸೂರ್ಯ, ಶತಕದ ಜೊತೆಯಾಟ ಕಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ತಲುಪಿಸಿದರು.

ಆರಂಭದಲ್ಲಿ ಇಶಾನ್ ಸ್ಫೋಟಕ ಬ್ಯಾಟಿಂಗ್ ಆಡುತ್ತಿದ್ದಾಗ ಒಂಟಿ ರನ್ ಕದಿಯುವಲ್ಲಿ ಗಮನ ಹರಿಸಿದ ಸೂರ್ಯ, ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಮೊದಲ 10 ಎಸೆತಗಳಲ್ಲಿ ಎಸೆತಕ್ಕೆ ಒಂದರಂತೆ 10 ರನ್ ಮಾತ್ರ ಗಳಿಸಿದ್ದರು.

ನಂತರ ಕಿವೀಸ್ ವೇಗಿ ಝಾಕ್ ಫೌಲ್ಕ್ಸ್ ಅವರ ಓವರ್‌ವೊಂದರಲ್ಲಿ ಸತತ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 25 ರನ್ ಗಳಿಸುವ ಮೂಲಕ ಅಬ್ಬರಿಸಿದರು.

ಸೂರ್ಯಕುಮಾರ್ ಯಾದವ್

ಅಲ್ಲದೆ 23 ಎಸೆತಗಳಲ್ಲೇ ಅರ್ಧಶತಕದ ಗಡಿ ದಾಟಿದರು. ಆ ಮೂಲಕ ಎಂಟನೇ ಸಲ 25 ಅಥವಾ ಅದಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ಭಾರತದವರೇ ಆದ ಅಭಿಷೇಕ್ ಶರ್ಮಾ ದಾಖಲೆಯನ್ನು ಸರಿಗಟ್ಟಿದರು.

ಇನ್ನು ರನ್ ಬರ ಎದುರಿಸುತ್ತಿದ್ದ ಸೂರ್ಯ, 23 ಇನಿಂಗ್ಸ್‌ಗಳ ಬಳಿಕ ಅರ್ಧಶತಕ ಗಳಿಸಿದರು. 2024ರಲ್ಲಿ ಬಾಂಗ್ಲಾದೇಶ ವಿರುದ್ಧ ಸೂರ್ಯ ಕೊನೆಯದಾಗಿ ಅರ್ಧಶತಕ ಗಳಿಸಿದ್ದರು.

ಟಿ20 ಕ್ರಿಕೆಟ್‌ನಲ್ಲಿ 200ಕ್ಕೂ ಅಧಿಕ ರನ್ ಚೇಸ್ ಮಾಡಿದಾಗ 10ನೇ ಸಲ ಅರ್ಧಶತಕದ ಸಾಧನೆಯನ್ನು ಸೂರ್ಯ ಮಾಡಿದರು. ಆ ಮೂಲಕ ಜೋಸ್ ಬಟ್ಲರ್, ಡೇವಿಡ್ ವಾರ್ನರ್ ಹಾಗೂ ರೀಜಾ ಹೆಂಡ್ರಿಕ್ಸ್ ಸಾಧನೆ ಸರಿಗಟ್ಟಿದರು.

37 ಎಸೆತಗಳನ್ನು ಎದುರಿಸಿದ ಸೂರ್ಯ 82 ರನ್ ಗಳಿಸಿ ಔಟಾಗದೆ ಉಳಿದರು. ಅವರ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳು ಸೇರಿದ್ದವು.

ಸೂರ್ಯಕುಮಾರ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.