
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗಾಗಿ 17 ಸದಸ್ಯರ ಮುಂಬೈ ತಂಡವನ್ನು ಘೋಷಣೆ ಮಾಡಲಾಗಿದೆ. ಈ ತಂಡದಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಶಿವಂ ದುಬೆ ಹಾಗೂ ಅಜಿಂಕ್ಯಾ ರಹಾನೆ ಇದ್ದು, ತಂಡವನ್ನು ಶಾರ್ದೂಲ್ ಠಾಕೂರ್ ಮುನ್ನಡೆಸಲಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಕಳೆದ ವರ್ಷ ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಆದರೆ, ಈ ಬಾರಿ ಅವರು ಗಾಯಗೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ.
ತಂಡದಲ್ಲಿ ಹಾರ್ದಿಕ್ ತಮೋರೆ ಹಾಗೂ ಅಂಗ್‌ಕ್ರಿಶ್ ರಘುವಂಶಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದು, ವೇಗಿದ ವಿಭಾಗದಲ್ಲಿ ತುಷಾರ್ ದೇಶಪಾಂಡೆ ಮತ್ತು ಸ್ಪಿನ್ನರ್ ತನುಷ್ ಕೋಟ್ಯಾನ್ ಸ್ಥಾನ ಪಡೆದಿದ್ದಾರೆ.
ಸದ್ಯ, ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ಲೆಗ್‌ನಲ್ಲಿ ಆಡಿರುವ 5 ಪಂದ್ಯಗಳಿಂದ 3 ಶತಕ ಮತ್ತು 1 ಅರ್ಧಶತಕ ಸಹಿತ 530 ರನ್ ಗಳಿಸಿರುವ ಸಿದ್ದೇಶ್ ಲಾಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಎಲೈಟ್ ವಿಭಾಗವು ನವೆಂಬರ್ 26ರಿಂದ ಡಿಸೆಂಬರ್ 18ರವರೆಗೆ ನಡೆಯಲಿದೆ. ಸ್ಪರ್ಧೆಯ ಮೊದಲ ಸುತ್ತಿನ ಪಂದ್ಯಗಳು ಲಖನೌ, ಹೈದರಾಬಾದ್, ಅಹಮದಾಬಾದ್ ಮತ್ತು ಕೋಲ್ಕತ್ತದಲ್ಲಿ ನಡೆಯಲಿದ್ದು, ನಾಕೌಟ್ ಪಂದ್ಯಗಳು ಇಂದೋರ್‌ನಲ್ಲಿ ನಡೆಯಲಿವೆ.
ಮುಂಬೈ ತನ್ನ ಮೊದಲ ಪಂದ್ಯದಲ್ಲಿ ನವೆಂಬರ್ 26 ರಂದು ರೈಲ್ವೇಸ್ ತಂಡವನ್ನು ಎದುರಿಸಲಿದೆ.
ತಂಡ: ಶಾರ್ದೂಲ್ ಠಾಕೂರ್ (ನಾಯಕ), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಅಂಗ್‌ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ, ಆಯುಷ್ ಮ್ಹಾತ್ರೆ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಸಿದ್ದೇಶ್ ಲಾಡ್, ಶಿವಂ ದುಬೆ, ಸಾಯಿರಾಜ್ ಪಾಟೀಲ್, ಮುಶೀರ್ ಖಾನ್, ಸೂರ್ಯಾಂಶ್ ಶೆಡ್ಗೆ, ಅಥರ್ವ ಅಂಕೋಲೆಕರ್, ತನುಷ್ ಕೋಟ್ಯಾನ್,ಶಮ್ಸ್ ಮುಲಾನಿ, ತುಷಾರ ದೇಶಪಾಂಡೆ, ಇರ್ಫಾನ್ ಉಮೈರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.