ADVERTISEMENT

T20 World Cup |ಲಂಕಾ ವಿರುದ್ಧವೂ ಗೆದ್ದ ಜಿಂಬಾಬ್ವೆ: ಬಿ ಗುಂಪಿನಲ್ಲಿ ಅಗ್ರಸ್ಥಾನ

ಏಜೆನ್ಸೀಸ್
Published 19 ಫೆಬ್ರುವರಿ 2026, 15:55 IST
Last Updated 19 ಫೆಬ್ರುವರಿ 2026, 15:55 IST
ಮಿಂಚಿನ ಆಟವಾಡಿ ಜಿಂಬಾಬ್ವೆ ಹೋರಾಟಕ್ಕೆ ಜೀವತುಂಬಿದ ಸಿಕಂದರ್ ರಝಾ
ಎಎಫ್‌ಪಿ ಚಿತ್ರ
ಮಿಂಚಿನ ಆಟವಾಡಿ ಜಿಂಬಾಬ್ವೆ ಹೋರಾಟಕ್ಕೆ ಜೀವತುಂಬಿದ ಸಿಕಂದರ್ ರಝಾ ಎಎಫ್‌ಪಿ ಚಿತ್ರ   

ಕೊಲಂಬೊ: ಹಾಲಿ ಟಿ20 ವಿಶ್ವಕಪ್‌ನ ‘ಅಚ್ಚರಿಯ ಪ್ಯಾಕೇಜ್’ ಎನಿಸಿರುವ ಜಿಂಬಾಬ್ವೆ ತಂಡ ಆರು ವಿಕೆಟ್‌ಗಳಿಂದ ಆತಿಥೇಯ ಶ್ರೀಲಂಕಾ ತಂಡಕ್ಕೂ ಆಘಾತ ನೀಡಿ, ಅಜೇಯ ಸಾಧನೆಯೊಡನೆ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.  ಆ ಮೂಲಕ ಆತ್ಮವಿಶ್ವಾಸದೊಡನೆ ಸೂಪರ್ ಎಂಟರ ಹಂತಕ್ಕೆ ಸಜ್ಜಾಯಿತು.

ರಣಸಿಂಘೆ ಪ್ರೇಮದಾಸ ಕ್ರೀಡಾಂಗಣದಲ್ಲಿ ಗೆಲುವಿಗೆ 179 ರನ್‌ಗಳ ಗುರಿಯನ್ನು ಎದುರಿಸಿದ ಜಿಂಬಾಬ್ವೆ ಮೂರು ಎಸೆತಗಳು ಇರುವಂತೆ 4 ವಿಕೆಟ್‌ಗೆ 182 ರನ್ ಹೊಡೆಯಿತು. ಬ್ರಯಾನ್ ಬೆನೆಟ್‌ (ಔಟಾಗದೇ 63, 48 ಎಸೆತ, 4x8) ಸಮಯೋಚಿತ ಅರ್ಧ ಶತಕ ಬಾರಿಸಿ ಇನಿಂಗ್ಸ್‌ಗೆ ಲಂಗರು ಹಾಕಿದರು. ನಾಯಕ ಸಿಕಂದರ್ ರಝಾ (45 ರನ್, 26 ಎಸೆತ) ಬೀಸಾಟವಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜಿಂಬಾಬ್ವೆ ತಂಡವು ಹೋದ ವಾರ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿತ್ತು. ಒಮಾನ್ ವಿರುದ್ಧ ಗೆದ್ದ ಆಫ್ರಿಕಾದ ತಂಡವು ನಂತರ ಐರ್ಲೆಂಡ್ ವಿರುದ್ಧದ ಪಂದ್ಯ ಮಂಗಳವಾರ ಮಳೆಯಿಂದ ಕೊಚ್ಚಿಹೋದ ಕಾರಣ ಒಂದು ಪಾಯಿಂಟ್ ಪಡೆದಿತ್ತು.

ADVERTISEMENT

ಒಂದು ಹಂತದಲ್ಲಿ ಜಿಂಬಾಬ್ವೆ 36 ಎಸೆತಗಳಲ್ಲಿ 65 ರನ್‌ (ಓವರಿಗೆ ಸರಾಸರಿ 11ರಂತೆ) ಗಳಿಸಬೇಕಾದ ಕಠಿಣ ಸನ್ನಿವೇಶ ಎದುರಿಸಿತ್ತು. ಈ ಹಂತದಲ್ಲಿ ಸಿಕಂದರ್ ಆಕ್ರಮಣಕಾರಿ ಆಟದೊಡನೆ ತಂಡದ ಚೇಸ್‌ಗೆ ಜೀವತುಂಬಿದರು. ಲೆಗ್‌ ಸ್ಪಿನ್ನರ್ ದುಶಾನ್ ಹೇಮಂತ ಅವರ ಒಂದೇ ಓವರಿನಲ್ಲಿ ಅವರು ಎರಡು ಸಿಕ್ಸರ್ ಸೇರಿದಂತೆ 20 ರನ್ ಬಾಚಿದ್ದು, ಪಂದ್ಯಕ್ಕೆ ತಿರುವು ನೀಡಿತು. ಇವರಿಬ್ಬರು ಮೂರನೇ ವಿಕೆಟ್‌ಗೆ 40 ಎಸೆತಗಳಲ್ಲಿ ವೇಗವಾಗಿ 69 ರನ್ ಸೇರಿಸಿದರು. 

ಕೊನೆಯ ಓವರಿನಲ್ಲಿ ಎಂಟು ರನ್‌ಗಳ ಅಗತ್ಯವಿತ್ತು. ಟೋನಿ ಮುನ್ಯೋಂಗ ಅವರು ಮಹೀಶ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಮಿಡ್‌ ವಿಕೆಟ್‌ಗೆ ಸಿಕ್ಸರ್ ಎತ್ತಿ ಒತ್ತಡ ನಿವಾರಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಇನಿಂಗ್ಸ್‌ಗೆ ಪಥುಮ್ ನಿಸಾಂಕ ಅರ್ಧ ಶತಕದೊಡನೆ ಮತ್ತೊಮ್ಮೆ ಆಧಾರವಾದರು. ಸೋಮವಾರ ಆಸ್ಟ್ರೇಲಿಯಾ ವಿರುದ್ಧ (ಟೂರ್ನಿಯ ಮೊದಲ) ಶತಕ ಬಾರಿಸಿದ್ದ ನಿಸ್ಸಾಂಕ ಮತ್ತೊಮ್ಮೆ ಉಪಯುಕ್ತ ಆಟವಾಡಿ 47 ಎಸೆತಗಳಲ್ಲಿ 62 ರನ್ ಗಳಿಸಿದರು. ಇದು ಟಿ20 ವಿಶ್ವಕಪ್‌ಗಳಲ್ಲಿ ಅವರ ಏಳನೇ ಅರ್ಧ ಶತಕ. ವಿಶ್ವಕಪ್‌ನಲ್ಲಿ ಮಹೇಲ ಜಯವರ್ಧನ ಅವರ ಗರಿಷ್ಠ ಅರ್ಧಶತಕಗಳ ದಾಖಲೆ ಸರಿಗಟ್ಟಿದರು. ಪ್ರತಿಭಾನ್ವಿತ ಪವನ್ ರತ್ನಾಯಕೆ ಕೊನೆಗಳಿಗೆಯಲ್ಲಿ ಮಿಂಚಿನ ಆಟವಾಡಿ 25 ಎಸೆತಗಳಲ್ಲಿ 44 ರನ್ ಸಿಡಿಸಿದ್ದರಿಂದ ತಂಡ 7 ವಿಕೆಟ್‌ಗೆ 178 ರನ್‌ಗಳ ಹೋರಾಟದ ಮೊತ್ತ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 7 ವಿಕೆಟ್‌ಗೆ 178 (ಪಥುಮ್ ನಿಸಾಂಕ 62, ಕುಸಲ್ ಪೆರೀರಾ 22, ಪವನ್ ರತ್ನಾಯಕೆ 44; ಬ್ಲೆಸಿಂಗ್ ಮುಝರಾಬಾನಿ 38ಕ್ಕೆ2, ಬ್ರಾಡ್ ಇವಾನ್ಸ್ 35ಕ್ಕೆ2); ಜಿಂಬಾಬ್ವೆ: 19.3 ಓವರುಗಳಲ್ಲಿ 4 ವಿಕೆಟ್‌ಗೆ 182 (ಬ್ರಯಾನ್ ಬೆನೆಟ್ ಔಟಾಗದೇ 63, ತಡಿವನುಶೆ ಮರುಮಣಿ 34, ರಿಯಾನ್ ಬರ್ಲ್ 23, ಸಿಕಂದರ್ ರಝಾ 45; ದುಶನ್ ಹೇಮಂತ 36ಕ್ಕೆ2). ಪಂದ್ಯದ ಆಟಗಾರ: ಸಿಕಂದರ್ ರಝಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.