ADVERTISEMENT

ಬ್ರಾವೊಗೆ ವಿದಾಯ; ವಿಕೆಟ್ ಪಡೆದ ಖುಷಿಯಲ್ಲಿ ಮಾರ್ಶ್‌ರನ್ನು ತಬ್ಬಿಕೊಂಡ ಗೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2021, 15:20 IST
Last Updated 6 ನವೆಂಬರ್ 2021, 15:20 IST
ಡ್ವೇನ್ ಬ್ರಾವೊ ಹಾಗೂ ಕ್ರಿಸ್ ಗೇಲ್
ಡ್ವೇನ್ ಬ್ರಾವೊ ಹಾಗೂ ಕ್ರಿಸ್ ಗೇಲ್   

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯವು ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು.

ಡೇವಿಡ್ ವಾರ್ನರ್ (89*) ಹಾಗೂ ಮಿಚೆಲ್ ಮಾರ್ಶ್ (53) ಬಿರುಸಿನ ಅರ್ಧಶತಕದ ಬೆಂಬಲದೊಂದಿಗೆ ಆಸೀಸ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಸೋಲಿನ ಹೊರತಾಗಿಯೂವಿಂಡೀಸ್ ಪಾಲಿಗೂ ಈ ಪಂದ್ಯ ಸ್ಮರಣೀಯವೆನಿಸಿತ್ತು. ಡ್ವೇನ್ ಬ್ರಾವೊ ಸೋಲಿನೊಂದಿಗೆ ವಿದಾಯವನ್ನು ಹಾಡಿದ್ದಾರೆ. 42 ವರ್ಷದ ಕ್ರಿಸ್ ಗೇಲ್ ಸಹ ವಿಂಡೀಸ್ ಸಮವಸ್ತ್ರದಲ್ಲಿ ಕೊನೆಯ ಪಂದ್ಯವನ್ನು ಆಡಿದ್ದಾರೆ ಎಂದೇ ಅಂದಾಜಿಸಲಾಗಿದೆ.

ಇವೆಲ್ಲವೂ ಅವಿಸ್ಮರಣೀಯ ಕ್ಷಣಗಳಿಗೆ ಎಡೆಮಾಡಿಕೊಟ್ಟಿತ್ತು. ಡ್ವೇನ್ ಬ್ರಾವೊ ಹಾಗೂ ಕ್ರಿಸ್ ಗೇಲ್ ಅವರನ್ನು ಆಸೀಸ್ ಆಟಗಾರರು ಗೌರವಿಸಿದರು. ಈ ಮೂಲಕ ಕ್ರೀಡಾಸ್ಪೂರ್ತಿಯನ್ನು ಮೆರೆದರು.

ಬ್ಯಾಟಿಂಗ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಅಂತಿಮ ಹಂತದಲ್ಲಿ ಬೌಲಿಂಗ್ ಮಾಡಿ ಒಂದು ವಿಕೆಟ್ ಕಬಳಿಸಿ ಮಿಂಚಿದರು. ಅಲ್ಲದೆ ವಿಕೆಟ್ ಪಡೆದ ಖುಷಿಯಲ್ಲಿ ಓಡೋಡಿ ಹೋಗಿ ಬ್ಯಾಟರ್ ಮಿಚೆಲ್ ಮಾರ್ಶ್ ಅವರನ್ನು ತಬ್ಬಿಕೊಂಡರು.

ಇದಕ್ಕೂ ಮೊದಲು ಔಟ್ ಆಗಿ ಪೆವಿಲಿಯನ್‌ಗೆ ಹಿಂತಿರುಗಿದ ಗೇಲ್, ಸಹಿ ಹಾಕಿದ ಗ್ಲೋವ್ ಅನ್ನು ಅಭಿಮಾನಿಗಳಿಗೆ ನೀಡುವ ಮೂಲಕ ಗಮನ ಸೆಳೆದರು.

ಗೇಲ್, ಬ್ರಾವೊ ಅವರ ಜೊತೆಗಿನ ವಿಂಡೀಸ್ ಆಟಗಾರರ ಒಡನಾಟವು ಮತ್ತಷ್ಟು ಮುದವನ್ನು ನೀಡಿತು. ಇದರೊಂದಿಗೆ 2012 ಹಾಗೂ 2016 ಟ್ವೆಂಟಿ-20 ವಿಶ್ವಕಪ್ ಗೆದ್ದ ವಿಂಡೀಸ್‌ನ ದಿಗ್ಗಜ ಆಟಗಾರರ ಸುವರ್ಣ ಅಧ್ಯಾಯಕ್ಕೆ ತರೆ ಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.