2024ರ ಟಿ20 ವಿಶ್ವಕಪ್ ಗೆಲುವು
(ಚಿತ್ರ ಕೃಪೆ: X/)
ನವದೆಹಲಿ: ಭಾರತದ ಟ್ವೆಂಟಿ-20 ವಿಶ್ವಕಪ್ ಗೆಲುವಿಗೀಗ ಒಂದು ವರ್ಷ ಪೂರ್ಣಗೊಳಿಸಿದ ಸಂಭ್ರಮ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಮೆರಿಕ ಹಾಗೂ ಕೆರೆಬಿಯನ್ ಆತಿಥ್ಯದಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಟ್ರೋಫಿ ಜಯಿಸಿತ್ತು.
ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಸಲ ಹಾಗೂ 13 ವರ್ಷಗಳ ಬಳಿಕ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಭಾರತ 2007ರ ಚೊಚ್ಚಲ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಜಯಿಸಿತ್ತು.
'ಜಿಯೋಹಾಟ್‌ಸ್ಟಾರ್'ಗೆ ನೀಡಿದ ಸಂದರ್ಶನದಲ್ಲಿ ಭಾರತದ ಗೆಲುವಿನ ರೋಚಕ ಕ್ಷಣಗಳನ್ನು ರೋಹಿತ್ ಶರ್ಮಾ ಮೆಲುಕು ಹಾಕಿದ್ದಾರೆ.
'13 ವರ್ಷ ಬಹಳ ದೀರ್ಘ ಅವಧಿಯಾಗಿದೆ. ಬಹುತೇಕ ಆಟಗಾರರು 13 ವರ್ಷಗಳ ಕೆರಿಯರ್ ಹೊಂದಿರುವುದಿಲ್ಲ. ನಾವು ಕೊನೆಯದಾಗಿ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದೆವು. ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ. ವಿಶ್ವಕಪ್ ಬಗ್ಗೆಯೇ ಯೋಚಿಸುತ್ತಿದ್ದೆ. ನಾನು ಗಾಬರಿಯಾಗಿದ್ದೆ' ಎಂದು ಹೇಳಿದ್ದಾರೆ.
'ಖಂಡಿತವಾಗಿಯೂ ನಾನು ನರ್ವಸ್ ಆಗಿದ್ದೆ. ಆದರೆ ಹೆಚ್ಚು ತೋರಿಸಿಕೊಳ್ಳುತ್ತಿರಲಿಲ್ಲ. ಟ್ರೋಫಿ ಯಾರ ಪಾಲಾಗಲಿದೆ ಎಂಬ ಚಿಂತೆ ಕಾಡಿತ್ತು' ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಕೊನೆಯ ಓವರ್‌ನಲ್ಲಿ ಬೌಂಡರಿ ಗೆರೆಯಲ್ಲಿ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಅನ್ನು ಸೂರ್ಯಕುಮಾರ್ ಯಾದವ್ ಪಡೆದಿದ್ದರು. ಈ ಸಂದರ್ಭದಲ್ಲಿ ಎದೆಬಡಿತ ಹೆಚ್ಚಾಗಿತ್ತು ಎಂದು ರೋಹಿತ್ ಹೇಳಿದ್ದಾರೆ.
'ನಾನು ಸಿಕ್ಸರ್ ಎಂದು ಅಂದುಕೊಂಡಿದ್ದೆ. ಏಕೆಂದರೆ ಸೂರ್ಯ ಅವರಿಗೆ ವಿರುದ್ಧವಾಗಿ ನಾನು ನಿಂತಿದ್ದೆ. ಇನ್ನೈದು ಎಸೆತಗಳಲ್ಲಿ 10 ರನ್ ಬೇಕಿತ್ತು ಅಂತ ಲೆಕ್ಕಾಚಾರ ಹಾಕಿದ್ದೆ. ಆದರೆ ಅದೊಂದು ಅದ್ಭುತ ಕ್ಯಾಚ್ ಆಗಿತ್ತು' ಎಂದು ಹೇಳಿದ್ದಾರೆ.
'ಕ್ಯಾಚ್ ಅನ್ನು ಮುೂರನೇ ಅಂಪೈರ್ ಪರಿಶೀಲನೆಗಾಗಿ ನೀಡಿದಾಗ ನಾನು ಸೂರ್ಯ ಅವರ ಬಳಿ ನಿಂತಿದ್ದೆ. ನಾನು ಬೃಹತ್ ಪರದೆಯನ್ನು ನೋಡಲು ಬಯಸಿರಲಿಲ್ಲ. ಸೂರ್ಯ ಅವರನ್ನೇ ಕೇಳಿದ್ದೆ. ಸೂರ್ಯ ಕ್ಯಾಚ್ ಪಡೆದಿರುವುದಾಗಿ ದೃಢಪಿಸಿದರು' ಎಂದು ವಿವರಿಸಿದ್ದಾರೆ.
ಸೂರ್ಯ ತಂಡದ ಅದ್ಭುತ ಫೀಲ್ಡರ್ ಆಗಿದ್ದರು ಎಂದು ರೋಹಿತ್ ಗುಣಗಾನ ಮಾಡಿದ್ದಾರೆ.
ಈ ಮೊದಲು ಬ್ಯಾಟಿಂಗ್‌ನಲ್ಲಿ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ ಅವರ ಪ್ರದರ್ಶನವನ್ನು ರೋಹಿತ್ ಕೊಂಡಾಡಿದ್ದಾರೆ. 'ಮೂರು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಾಗ ನಾನು ಗಾಬರಿಯಾಗಿದ್ದೆ. ವಿರಾಟ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಇಷ್ಟು ವರ್ಷಗಳ ಕಾಲ ಆಡಿದ ಅನುಭವವು ನೆರವಿಗೆ ಬಂತು' ಎಂದು ಹೇಳಿದರು.
'ಬಹಳಷ್ಟು ಮಂದಿ ಅಕ್ಷರ್ ಪಟೇಲ್ ಅವರ ಇನಿಂಗ್ಸ್ ಬಗ್ಗೆಯೂ ಚರ್ಚಿಸುವುದಿಲ್ಲ. ಅಂತಹ ಒತ್ತಡದ ಪರಿಸ್ಥಿತಿಯಲ್ಲಿ ನಿರ್ಣಾಯಕ ಇನಿಂಗ್ಸ್ ಕಟ್ಟಿದರು, ಅಕ್ಷರ್, ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡೆ ಸಹ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು' ಎಂದು ತಿಳಿಸಿದರು.
ಕೊನೆಯ ಹಂತದಲ್ಲಿ ಜಸ್‌ಪ್ರೀತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಸ್ಪೆಲ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.