ADVERTISEMENT

T20 World Cup: ಇಶಾನ್, ಹಾರ್ದಿಕ್ ಅರ್ಧಶತಕ; ಭಾರತಕ್ಕೆ ಎರಡನೇ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2026, 19:02 IST
Last Updated 12 ಫೆಬ್ರುವರಿ 2026, 19:02 IST
<div class="paragraphs"><p>ಬಿಸಿಸಿಐ ಚಿತ್ರ</p></div>

ಬಿಸಿಸಿಐ ಚಿತ್ರ

   

ನವದೆಹಲಿ: ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಆಟದ ಬಲದಿಂದ ಹಾಲಿ ಚಾಂಪಿಯನ್ ಭಾರತ ತಂಡವು ಗುರುವಾರ ನಮೀಬಿಯಾ ಎದುರಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತು. 

ಟಿ20 ವಿಶ್ವಕಪ್ ಟೂರ್ನಿಯಲ್ಲಿ  ಆತಿಥೇಯ ಭಾರತ ತಂಡಕ್ಕೆ ಇದು ಎರಡನೇ ಜಯವಾಗಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ಎದುರು 90 ರನ್‌ಗಳಿಂದ ಗೆದ್ದಿತು.  

ADVERTISEMENT

ಅಭಿಷೇಕ್ ಶರ್ಮಾ ಅವರಿಲ್ಲದೇ ಕಣಕ್ಕಿಳಿದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ದೀರ್ಘ ಇನಿಂಗ್ಸ್‌ ಕಟ್ಟಿ
ಕೊಡಲಿಲ್ಲ. ಅವರ ಮೂರು ಸಿಕ್ಸರ್‌ಗಳ ಇನಿಂಗ್ಸ್‌ ಇನ್‌ಸ್ಟಾಗ್ರಾಮ್‌ ರೀಲ್‌ನಷ್ಟೇ ಅಲ್ಪಾಯುಷಿಯಾಯಿತು. ಆದರೆ ಇಶಾನ್ ಕಿಶನ್ ಅವರ ಬ್ಯಾಟಿಂಗ್ ವೆಬ್‌ ಸರಣಿಯಂತೆ ಪರಿಪೂರ್ಣ ಡ್ರಾಮಾ, ಸಾಹಸಗಳಿಂದ ಕೂಡಿತ್ತು.  ಕಿಶನ್ ನಮೀಬಿಯಾ ದಾಳಿಯನ್ನು ಹುಡಿಗಟ್ಟಿದರು. 24 ಎಸೆತಗಳಲ್ಲಿ 61 ರನ್‌ ಗಳಿಸಿದರು. ಆದರೆ ನಮೀಬಿಯಾ ತಂಡದ ನಾಯಕ ಜೆರಾರ್ಡ್ ಎರಸ್‌ಮಸ್ ಅವರ ಸೈಡ್ ಆರ್ಮ್ ಆಫ್‌ಬ್ರೇಕ್ ಬೌಲಿಂಗ್ ಮುಂದೆ ಆತಿಥೇಯ ಬ್ಯಾಟರ್‌ಗಳು ಪರದಾಡಿದ್ದು ಕೂಡ ನಿಜ.  ಭಾರತ ತಂಡವು 9 ವಿಕೆಟ್‌ಗಳಿಗೆ 209 ರನ್ ಗಳಿಸಿತು. ಹಾರ್ದಿಕ್  ಕಿಶನ್ ಅವರು ಐದು ಸಿಕ್ಸ್ ಮತ್ತು ಅರ್ಧ ಡಜನ್ ಬೌಂಡರಿಗಳನ್ನು ದಾಖಲಿಸಿದರು. ಇದರೊಂದಿಗೆ ಕೇವಲ 20 ಎಸೆತಗಳಲ್ಲಿ 50 ರನ್‌ ಸೇರಿಸಿದರು.

ಈ ಅಡಿಪಾಯದ ಮೇಲೆ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾರ್ದಿಕ್ ಪಾಂಡ್ಯ (52; 28ಎ) ಅವರು ದೊಡ್ಡ ಮೊತ್ತ ಪೇರಿಸಲು ಶಕ್ತಿ ತುಂಬಿದರು. ಬೌಲಿಂಗ್‌ನಲ್ಲಿಯೂ ಮಿಂಚಿದ ಅವರು (21ಕ್ಕೆ2) ನಮೀಬಿಯಾ ತಂಡವು 18.2 ಓವರ್‌ಗಳಲ್ಲಿ 116 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ವರುಣ್ ಚಕ್ರವರ್ತಿ (7ಕ್ಕೆ3) ಮತ್ತು ಅಕ್ಷರ್ ಪಟೇಲ್ (20ಕ್ಕೆ2) ಚೆಂದದ ಬೌಲಿಂಗ್ ಮಾಡಿದರು.

ಎರಸ್‌ಮಸ್ ಸೈಡ್‌ ಆರ್ಮ್ ಬೌಲಿಂಗ್: ಭಾರತದ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕದ ಎದುರು ನಮೀಬಿಯಾದ ಎರಸ್‌ಮಸ್ (20ಕ್ಕೆ4) ಅವರು ಅಮೋಘವಾದ ಬೌಲಿಂಗ್ ಮಾಡಿದರು. ಎರಸ್‌ಮಸ್ ಅವರು ಸೈಡ್‌ ಆರ್ಮ್ ಎಸೆತಗಳನ್ನೂ ಹಾಕಿದರು.

ಅಲ್ಲದೇ ಕೆಲವು ಎಸೆತಗಳನ್ನು ಕ್ರೀಸ್‌ಗಿಂತ  ಸುಮಾರು ಎರಡು ಯಾರ್ಡ್‌ಗಳನ್ನು ಹಿಂದಿನಿಂದಲೇ ಬೌಲಿಂಗ್ ಮಾಡಿದರು. ಇಂತಹದೇ ಒಂದು ಲೆಂಗ್ತ್‌ ಕಡಿಮೆಯಾದ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಹೋದ ತಿಲಕ್ ವರ್ಮಾ (25 ರನ್) ಔಟಾದರು. 

ಅರುಣ್ ಜೇಟ್ಲಿ ಕ್ರೀಡಾಂಗಣದ ಸಪಾಟಾದ ಪಿಚ್‌ನಲ್ಲಿ ಸಂಜು ಸ್ಯಾಮ್ಸನ್ ಆಡಿದ್ದು 8 ಎಸೆತಗಳನ್ನು ಮಾತ್ರ. ಅದರಲ್ಲಿ 3 ಸಿಕ್ಸರ್ ಮತ್ತು 1 ಬೌಂಡರಿಯಿದ್ದ 22 ರನ್‌ ಗಳಿಸಿದರು. ಉತ್ತಮ ಲಯದಲ್ಲಿ ಸಾಗುತ್ತಿದ್ದ ಅವರು ಬೆನ್ ಶಿಕೊಂಗೊ ಎಸೆತದಲ್ಲಿ ತಪ್ಪಾಗಿ ಅಂದಾಜಿಸಿ ದೊಡ್ಡ ಹೊಡೆತ ಆಡಿದರು. ಲಾರೆನ್ ಸ್ಟೀನ್ ಕ್ಯಾಂಪ್ ಕ್ಯಾಚ್ ಪಡೆದರು. 

ನಾಯಕ ಸೂರ್ಯಕುಮಾರ್ ಯಾದವ್ ಇನಿಂಗ್ಸ್‌ನ ಶ್ರೇಷ್ಠ ಎಸೆತದಲ್ಲಿ ದಂಡ ತೆತ್ತರು. ಎಡಗೈ ಸ್ಪಿನ್ನರ್ ಬರ್ನಾಡ್ ಸ್ಕೋಲ್ಜ್‌ ಅವರ ಎಸೆತವೊಂದು ಡಿಪ್ ಆಗಿ ತಿರುವು ಪಡೆಯಿತು. ಸೂರ್ಯ ಅದನ್ನು ಮುಂದಡಿ ಇಟ್ಟು ಆಡಲು ಯತ್ನಿಸಿ ಬೀಡ್ ಆದರು. ವಿಕೆಟ್‌ಕೀಪರ್ ಝೇನ್ ಗ್ರೀನ್ ಚುರುಕಾಗಿ ಸ್ಟಂಪಿಂಗ್ ಮಾಡಿದರು. ಸೂರ್ಯ ಒಂದು ಸಿಕ್ಸರ್ ಸಹಿತ 12 ರನ್ ಬಾರಿಸಿದರು. 

ಹಾರ್ದಿಕ್ ಮತ್ತು ಶಿವಂ ದುಬೆ (23; 16ಎ, 4X1, 6X1) ಜೊತೆಗೂಡಿ 5ನೇ ವಿಕೆಟ್ ಜೊತೆಯಾಟದಲ್ಲಿ 81 (39ಎ) ರನ್‌ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ‘ದ್ವಿಶತಕ’ದ ಗಡಿ ದಾಟಿತು. 

ಈ ಹಂತದಲ್ಲಿ ಮತ್ತೊಮ್ಮೆ ಕೈಚಳಕ ಮೆರೆದ ಎರಸ್‌ಮಸ್ ಒಂದೇ ಓವರ್‌ನಲ್ಲಿ ಹಾರ್ದಿಕ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಗಳಿಸಿದರು. ಶಿವಂ ದುಬೆ ರನ್‌ಔಟ್‌ ಆಗಲೂ ಪ್ರಮುಖ ಪಾತ್ರ ವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.