
ಗೌತಮ್ ಗಂಭೀರ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್
(ಪಿಟಿಐ ಚಿತ್ರ)
ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಸೂಪರ್ 8'ರ ಹಂತಕ್ಕೆ ವೇದಿಕೆ ಸಿದ್ದಗೊಂಡಿದೆ. ಆತಿಥೇಯ ಭಾರತ ತಂಡವು ಸೂಪರ್ ಎಂಟು ಹಂತದ ಮೊದಲ ಗುಂಪಿನಲ್ಲಿ ಕಾಣಿಸಿಕೊಂಡಿದೆ.
ಇದೇ ಗುಂಪಿನಲ್ಲಿ ಕಳೆದ ಬಾರಿಯ ರನ್ನರ್-ಅಪ್ ಆದ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ.
ಎರಡನೇ ಗುಂಪಿನಲ್ಲಿ ಜಂಟಿ ಆತಿಥ್ಯ ವಹಿಸುತ್ತಿರುವ ಶ್ರೀಲಂಕಾ ಜೊತೆಗೆ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ತೇರ್ಗಡೆ ಹೊಂದಿವೆ. ಇನ್ನೊಂದು ತಂಡ ಯಾವುದು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಬಲಿಷ್ಠ ಗುಂಪಿನಲ್ಲಿ ಭಾರತ...
ಸೂಪರ್ 8ರ ಹಂತದಲ್ಲಿ ತನ್ನ ಮೊದಲನೇ ಪಂದ್ಯದಲ್ಲಿ ಭಾರತ ತಂಡವು ಫೆಬ್ರುವರಿ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.
ನಂತರ ಫೆಬ್ರುವರಿ 26ರಂದು ಚೆನ್ನೈಯಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಜಿಂಬಾಬ್ವೆ ಸೂಪರ್ 8ರ ಹಂತಕ್ಕೆ ಪ್ರವೇಶಿಸಿತ್ತು.
ಸೂಪರ್ 8ರಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಮಾರ್ಚ್ 1ರಂದು ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ಸವಾಲನ್ನು ಭಾರತ ಎದುರಿಸಲಿದೆ.
ಒಟ್ಟು 20 ತಂಡಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳಿಗೆ ಫೆಬ್ರುವರಿ 20ರಂದು ತೆರೆ ಬೀಳಲಿದೆ. ಸೂರ್ಯಕುಮಾರ್ ಯಾದವ್ ಬಳಗವು ಇಂದು (ಬುಧವಾರ) ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಫೆಬ್ರುವರಿ 21ರಿಂದ ಮಾರ್ಚ್ 1ರವರೆಗೆ ಸೂಪರ್ 8 ಹಂತದ ಪಂದ್ಯಗಳು ನಿಗದಿಯಾಗಿವೆ. ಮಾರ್ಚ್ 4 ಹಾಗೂ 5ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಬಹುನಿರೀಕ್ಷಿತ ಫೈನಲ್ ಪಂದ್ಯವು ಮಾರ್ಚ್ 8ರಂದು ನಡೆಯಲಿದೆ.
ಸೂಪರ್ 8ರ ಹಂತದಲ್ಲಿ ಭಾರತದ ವೇಳಾಪಟ್ಟಿ ಇಂತಿದೆ:
ಫೆ.22: ಭಾರತ vs ದಕ್ಷಿಣ ಆಫ್ರಿಕಾ, ಅಹಮದಾಬಾದ್
ಫೆ.26: ಭಾರತ vs ಜಿಂಬಾಬ್ವೆ
ಮಾ.1: ಭಾರತ vs ವೆಸ್ಟ್ ಇಂಡೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.