ADVERTISEMENT

ಕ್ರಿಕೆಟಿಗ ಶಮಿಗೆ ಧರ್ಮದ ಹೆಸರಿನಲ್ಲಿ ನಿಂದನೆ;ದೇಶ ಬಿಡುವಂತೆ ನೆಟ್ಟಿಗರ ಪ್ರಚೋದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2021, 12:53 IST
Last Updated 25 ಅಕ್ಟೋಬರ್ 2021, 12:53 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ನವದೆಹಲಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನಲ್ಲಿ ಸೋಲು ಎದುರಾಗಿದೆ.

ಈ ನಡುವೆ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಪ್ರಮುಖವಾಗಿ ಶಮಿ ಧರ್ಮದ ಹೆಸರನ್ನು ಉಲ್ಲೇಖ ಮಾಡಿರುವ ನೆಟ್ಟಿಗರು, 'ದೇಶದ್ರೋಹಿ ಶಮಿ ಪಾಕಿಸ್ತಾನಕ್ಕೆ ಹೊರಟು ಹೋಗು' ಎಂದೆಲ್ಲ ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದಾರೆ.

ADVERTISEMENT

ಪಾಕಿಸ್ತಾನ ವಿರುದ್ಧ ಪಂದ್ಯ ಸೋತ ಬೆನ್ನಲ್ಲೇ ಶಮಿ ಅವರ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಶಮಿ ಅವರನ್ನು ಟ್ಯಾಗ್‌ ಮಾಡಿ ಧರ್ಮದ ವಿಚಾರದಲ್ಲಿ ಕೆಟ್ಟ ಕೆಟ್ಟ ಕಮೆಂಟ್‌ಗಳು ದಾಖಲಾಗಿದ್ದವು.

ಇದು ಕ್ರೀಡಾಪ್ರೇಮಿಗಳು ಸೇರಿದಂತೆ ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಶಮಿಗೆ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, 'ನಾನೂ ಕೂಡಾ ಹಿಂದೆ ಭಾರತ-ಪಾಕ್ ಪಂದ್ಯದ ಭಾಗವಾಗಿದ್ದೇನೆ. ಆದರೆ ಎಂದಿಗೂ ಪಾಕಿಸ್ತಾನಕ್ಕೆ ಹೋಗುವಂತೆ ಯಾರೂ ಹೇಳಿಲ್ಲ. ಕೆಲವು ವರ್ಷಗಳ ಹಿಂದಿನ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಈ ಕೆಟ್ಟ ವರ್ತನೆಯನ್ನು ಈಗಲೇ ನಿಲ್ಲಿಸಬೇಕು' ಎಂದು ಹೇಳಿದ್ದಾರೆ.

'ಮೊಹಮ್ಮದ್ ಶಮಿ ಮೇಲಿನ ಆನ್‌ಲೈನ್ ದಾಳಿ ಆಘಾತಕಾರಿಯಾಗಿದ್ದು, ನಾವು ಅವರ ಪರವಾಗಿ ನಿಲ್ಲುತ್ತೇನೆ. ಅವರು ಚಾಂಪಿಯನ್ ಆಟಗಾರನಾಗಿದ್ದು, ಭಾರತದ ಕ್ಯಾಪ್ ಧರಿಸುವ ಪ್ರತಿಯೊಬ್ಬ ಆಟಗಾರನೂ ನೆಟ್ಟಿಗರಿಗಿಂತಲೂ ಹೆಚ್ಚು ಭಾರತದ ಅಭಿಮಾನವನ್ನು ಹೊಂದಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೇವೆ, ಮುಂದಿನ ಪಂದ್ಯದಲ್ಲಿ ಸಾಬೀತುಪಡಿಸಿ' ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

'ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ' ಎಂದು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಬರೆದುಕೊಂಡಿದ್ದಾರೆ.

'ನಿಮ್ಮ ಬಗ್ಗೆ ನಾವು ಹೆಮ್ಮೆಪಟ್ಟುಕೊಳ್ಳುತ್ತೇವೆ ಶಮಿ ಭಾಯ್' ಎಂದು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅಭಿಪ್ರಾಯಪಟ್ಟಿದ್ದಾರೆ.

'ಟೀಕೆ ಮಾಡಬಹುದು ಆದರೆ ಕ್ರಿಕೆಟಿಗರನ್ನು ನಿಂದಿಸಬಾರದು. ಇದು ಕ್ರಿಕೆಟ್ ಆಟವಾಗಿದ್ದು, ಆ ದಿನ ಉತ್ತಮವಾಗಿ ಆಡಿದ ತಂಡ ಗೆದ್ದಿದೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ಕ್ರಿಕೆಟಿಗರು ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಿದ್ದಾರೆ' ಎಂದು ಯೂಸುಫ್ ಪಠಾಣ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.