ADVERTISEMENT

ಮಿಥಾಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ: ತಾಪ್ಸಿ ಪನ್ನು

ಪಿಟಿಐ
Published 8 ಜೂನ್ 2022, 11:11 IST
Last Updated 8 ಜೂನ್ 2022, 11:11 IST
ನಟಿ ತಾಪ್ಸಿ ಪನ್ನು ಇನ್‌ಸ್ಟಾಗ್ರಾಂ ಖಾತೆಯ ಸ್ಕ್ರೀನ್ ಗ್ರ್ಯಾಬ್
ನಟಿ ತಾಪ್ಸಿ ಪನ್ನು ಇನ್‌ಸ್ಟಾಗ್ರಾಂ ಖಾತೆಯ ಸ್ಕ್ರೀನ್ ಗ್ರ್ಯಾಬ್   

ಮುಂಬೈ: ಎರಡು ದಶಕಗಳ ಸುದೀರ್ಘ ವೃತ್ತಿಜೀವನದ ನಂತರ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಮಿಥಾಲಿ ರಾಜ್ ಅವರು ಸ್ಪೂರ್ತಿದಾಯಕ ವ್ಯಕ್ತಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.

232 ಏಕದಿನ ಪಂದ್ಯಗಳನ್ನು ಆಡಿರುವ ಮಿಥಾಲಿ, ದಾಖಲೆಯ 7805 ರನ್‌ ಗಳಿಸಿದ್ದಾರೆ. 12 ಟೆಸ್ಟ್ ಮತ್ತು 89 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ.

ಮಿಥಾಲಿ ರಾಜ್ ಅವರ ಜೀವನಾಧರಿತ ‘ಶಭಾಶ್ ಮಿಥು’ ಚಿತ್ರದಲ್ಲಿ ಮಿಥಾಲಿ ಪಾತ್ರವನ್ನು ನಿರ್ವಹಿಸಿರುವ ತಾಪ್ಸಿ ಪನ್ನು, ‘ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ.

ADVERTISEMENT

‘ತಮ್ಮ ಹೆಸರಿನಲ್ಲಿ ದಾಖಲೆಗಳನ್ನು ಹೊಂದಿರುವ ಕ್ರಿಕೆಟಿಗರು ಇದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗರೂ ಇದ್ದಾರೆ. ನಿಮಗೆ ಸ್ಫೂರ್ತಿ ನೀಡುವ ಮತ್ತು ಅವರಿಗೆ ಸಾಧ್ಯವಾದರೆ ನೀವೂ ಮಾಡಬಹುದು ಎಂದು ನಂಬಿಕೆ ಹುಟ್ಟಿಸುವ ಕ್ರಿಕೆಟಿಗರೂ ಇದ್ದಾರೆ!’ ಎಂದು ಅವರು ಹೇಳಿದ್ದಾರೆ.

‘ತಮ್ಮದೇ ಆದ ಶ್ರೇಷ್ಠ ಆಕರ್ಷಕ ಶೈಲಿಯಲ್ಲಿ ಅವರು ಆಡಿದ್ದಾರೆ ಮತ್ತು ಮಹಿಳೆಯರ ಕ್ರಿಕೆಟ್ ಆಟದ ಗತಿಯನ್ನೇ ಬದಲಾಯಿಸಿದ್ದಾರೆ’ಎಂದು ಪನ್ನು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಿಥಾಲಿ ರಾಜ್ ಅವರ ಕ್ರಿಕೆಟ್ ಪರಂಪರೆ ಸದಾ ನೆನಪಿನಲ್ಲಿ ಉಳಿಯುವುದು. ವಿಶೇಷವಾಗಿ ಮಹಿಳಾ ಕ್ರಿಕೆಟ್‌ಗೆ ಅವರ ಕೊಡುಗೆ ಸ್ಮರಣಾರ್ಹ ಎಂದು ಅವರು ಹೇಳಿದ್ಧಾರೆ.

ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇರುವ ‘ಶಭಾಶ್ ಮಿಥು’ಚಿತ್ರದಲ್ಲಿ ಮಿಥಾಲಿ ರಾಜ್ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಪನ್ನು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.