ಆಸೀಸ್ ಪ್ರವಾಸಕ್ಕೆ ಹೊರಟ ಆಟಗಾರರು
ಚಿತ್ರ ಕೃಪೆ: @GillTheWill77
ನವದೆಹಲಿ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾಗೆ ಬುಧವಾರ ಪ್ರಯಾಣಿಸಿದರು. ಅವರೊಂದಿಗೆ ಭಾರತ ತಂಡದ ಇನ್ನೂ ಕೆಲವು ಆಟಗಾರರೂ ಇದ್ದರು.
ಇದೇ 19ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ತಂಡವು ಆಡಲಿದೆ. ಮೊದಲ ಬ್ಯಾಚ್ ಆಟಗಾರರು ಅಲ್ಲಿಗೆ ತೆರಳಿದರು. ಇದರಲ್ಲಿ ಕೊಹ್ಲಿ ಮತ್ತು ರೋಹಿತ್ ಜೊತೆಗೆ ನಾಯಕ ಶುಭಮನ್ ಗಿಲ್, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ ಕೃಷ್ನ ಇದ್ದಾರೆ. ಅಲ್ಲದೇ ನೆರವು ಸಿಬ್ಬಂದಿಯೂ ಇದ್ದಾರೆ.
ಬುಧವಾರ ಬೆಳಿಗ್ಗೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾ ವಿಮಾನ ಏರಿದರು. ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ಕೆಲವು ಅಭಿಮಾನಿಗಳು ಆಟಗಾರರನ್ನು ನೋಡಲು ಸಾಲುಗಟ್ಟಿದ್ದರು.
ಎರಡನೇ ಬ್ಯಾಚ್‌ನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಇನ್ನುಳಿದ ಆಟಗಾರರು ಸಂಜೆಯ ವಿಮಾನಕ್ಕೆ ತೆರಳಿದರು.
ಭಾರತ ತಂಡವು ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಲಿದೆ. ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿವೆ.
ನಂತರ ಐದು ಟಿ20 ಪಂದ್ಯಗಳ ಸರಣಿ ಕೂಡ ನಡೆಯಲಿದೆ. ಈ ಮಾದರಿಯಲ್ಲಿ ಅಡುವ ಪರಿಣತರು ಅ. 22ರಂದು ಆಸ್ಟ್ರೇಲಿಯಾಕ್ಕೆ ತೆರಳುವರು. 29ರಿಂದ ಸರಣಿ ಆರಂಭವಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.