ADVERTISEMENT

ಲಂಕಾ, ಆಸೀಸ್ ಸರಣಿಗೆ ಭಾರತ ತಂಡ ಪ್ರಕಟ: ರೋಹಿತ್‌ಗೆ ರೆಸ್ಟ್, ಧವನ್–ಬೂಮ್ರಾ ವಾಪಸ್

ಟಿ20–ಏಕದಿನ ಸರಣಿ

ಏಜೆನ್ಸೀಸ್
Published 23 ಡಿಸೆಂಬರ್ 2019, 13:46 IST
Last Updated 23 ಡಿಸೆಂಬರ್ 2019, 13:46 IST
   

ನವದೆಹಲಿ:ಮುಂದಿನ ವರ್ಷ ಜನವರಿಯಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ನಡೆಯಲಿರುವ ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್‌, ವೇಗಿ ಜಸ್‌ಪ್ರೀತ್‌ ಬೂಮ್ರಾ ತಂಡ ಕೂಡಿಕೊಂಡಿದ್ದಾರೆ.

ಬೆನ್ನು ಮೂಳೆ ಮುರಿತದಿಂದಾಗಿಸೆಪ್ಟೆಂಬರ್ ತಿಂಗಳಿನಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಬೂಮ್ರಾ ಹಾಗೂಮೊಣಕಾಲು ನೋವಿನಿಂದ ಬಳಲುತ್ತಿದ್ದ ಧವನ್‌ ಇದೀಗ ಫಿಟ್‌ ಆಗಿದ್ದಾರೆ. ಆ ಬಗ್ಗೆ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಮಾಹಿತಿ ನೀಡಿದ್ದಾರೆ. ಅವರು, ‘ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಿಗೆ ಜಸ್‌ಪ್ರೀತ್‌ ಬೂಮ್ರಾ, ಶಿಖರ್‌ ಧವನ್‌ ವಾಪಸ್‌ ಆಗಿದ್ದಾರೆ. ರೋಹಿತ್‌ ಶರ್ಮಾ ಮತ್ತು ಮೊಹಮದ್‌ ಶಮಿಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಬೆನ್ನು ನೋವಿಗೆ ಒಳಗಾಗಿದ್ದ ದೀಪಕ್‌ ಚಾಹರ್‌ ಅವರನ್ನು ಕೈಬಿಡಲಾಗಿದೆ. ಅವರು ಬದಲು ಮೂರನೇ ಪಂದ್ಯಕ್ಕೆ ಸ್ಥಾನ ಪಡೆದಿದ್ದ ನವದೀಪ್‌ ಶೈನಿ ತಂಡದಲ್ಲಿ ಮುಂದುವರಿಯಲಿದ್ದಾರೆ.

ADVERTISEMENT

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯು ಜನವರಿ 5 ರಿಂದ ಗುವಾಹಟಿಯಲ್ಲಿ ಆರಂಭವಾಗಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಇಂಧೋರ್‌ (ಜ.7) ಮತ್ತು ಪುಣೆಯಲ್ಲಿ (ಜ.10) ನಡೆಯಲಿವೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನಸರಣಿಯ ಮೊದಲ ಪಂದ್ಯವುಜನವರಿ 14ರಂದು ಮುಂಬೈನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜ.17ರಂದು ರಾಜ್‌ಕೋಟ್‌ ಹಾಗೂ ಮೂರನೇ ಪಂದ್ಯ ಜ.19ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ವಿರಾಟ್‌ ಕೊಹ್ಲಿ (ನಾಯಕ) ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಜಸ್‌ಪ್ರಿತ್‌ ಬೂಮ್ರಾ, ಶಾರ್ದೂಲ್‌ ಠಾಕೂರ್‌, ಮನೀಷ್‌ ಪಾಂಡೆ, ವಾಷಿಂಗ್ಟನ್‌ ಸುಂದರ್‌, ಸಂಜು ಸ್ಯಾಮ್ಸನ್‌

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ
ವಿರಾಟ್‌ ಕೊಹ್ಲಿ (ನಾಯಕ) ಶಿಖರ್‌ ಧವನ್‌, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಕೇದಾರ್‌ ಜಾದವ್‌, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಜಸ್‌ಪ್ರಿತ್‌ ಬೂಮ್ರಾ, ಶಾರ್ದೂಲ್‌ ಠಾಕೂರ್‌, ಮನೀಷ್‌ ಪಾಂಡೆ, ನವದೀಪ್‌ ಶೈನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.