ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್ ಆ್ಯಂಡರ್ಸನ್
ಪಿಟಿಐ ಚಿತ್ರಗಳು
ಲಂಡನ್: ಭಾರತ ಕ್ರಿಕೆಟ್ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (ಭಾರತ) ಹಾಗೂ ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್) ಹೆಸರಿನಲ್ಲಿ ಸ್ಥಾಪಿಸಲಾಗಿರುವ ಚೊಚ್ಚಲ 'ತೆಂಡೂಲ್ಕರ್–ಆ್ಯಂಡರ್ಸನ್ ಟ್ರೋಫಿ'ಗಾಗಿ ಪೈಪೋಟಿ ನಡೆಸಲಿವೆ.
ಜೂನ್ 20ರಂದು ಹೆಡಿಂಗ್ಲೆಯಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ಗೂ ಮುನ್ನ 'ತೆಂಡೂಲ್ಕರ್–ಆ್ಯಂಡರ್ಸನ್ ಟ್ರೋಫಿ' ಅನಾವರಣಗೊಳ್ಳಲಿದೆ ಎಂದು ಬಿಬಿಸಿ ವರದಿ ಮಾಡಿದೆ. ಆದರೆ, ಈ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದೂ ಉಲ್ಲೇಖಿಸಲಾಗಿದೆ.
ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವುರ, ಟೆಸ್ಟ್ ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. 1989ರಿಂದ 2013ರ ವರೆಗೆ ಆಡಿದ 200 ಟೆಸ್ಟ್‌ಗಳಲ್ಲಿ ಅವರು ಒಟ್ಟು 15,921 ರನ್ ಕಲೆಹಾಕಿದ್ದಾರೆ. ಅದಷ್ಟೇ ಅಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ.
ಹಾಗೆಯೇ, ಆ್ಯಂಡರ್ಸನ್ ಅವರು ದೀರ್ಘ ಮಾದರಿಯಲ್ಲಿ ಇಂಗ್ಲೆಂಡ್ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಹಾಗೂ ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ವೇಗಿ ಎನಿಸಿಕೊಂಡಿದ್ದಾರೆ. 188 ಟೆಸ್ಟ್‌ಗಳಿಂದ ಒಟ್ಟು 704 ವಿಕೆಟ್ ಉರುಳಿಸಿರುವ ಅವರು, ಸ್ಪಿನ್ ದಂತಕತೆಗಳಾದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್ ವಾರ್ನ್ (708) ನಂತರದ ಸ್ಥಾನದಲ್ಲಿದ್ದಾರೆ.
'ಜಿಮ್ಮಿ' ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗಿನಿಂದ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗದ ಮೆಂಟರ್ ಆಗಿದ್ದಾರೆ.
ಪಟೌಡಿ ಟ್ರೋಫಿ ನಿವೃತ್ತಿ
ಇಫ್ತಿಕರ್ ಅಲಿ ಖಾನ್ ಪಟೌಡಿ ಅವರು ಉಭಯ ತಂಡಗಳ ಪರ ಟೆಸ್ಟ್ ಆಡಿದ ಏಕೈಕ ಕ್ರಿಕೆಟಿಗ ಎನಿಸಿದ್ದರು. ಅವರ ಮೊಮ್ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತ ತಂಡದ ನಾಯಕರಾಗಿದ್ದರು. ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದ 'ಪಟೌಡಿ ಟ್ರೋಫಿ'ಗಾಗಿ ಈ ಎರಡೂ ತಂಡಗಳು ಈವರೆಗೆ ನಡೆಸಿದ್ದವು.
'ಪಟೌಡಿ ಟ್ರೋಫಿ'ಗೆ ನಿವೃತ್ತಿ ಘೋಷಿಸುವುದಾಗಿ ಆ ಕುಟುಂಬಕ್ಕೆ ಇಸಿಬಿ ಇದೇ (2025ರ) ಮಾರ್ಚ್‌ನಲ್ಲಿ ಪತ್ರ ಬರೆದಿತ್ತು.
ಸಚಿನ್–ಆ್ಯಂಡರ್ಸನ್ ಮುಖಾಮುಖಿ
ಈ ಇಬ್ಬರು ಆಟಗಾರರು ಒಟ್ಟು 14 ಟೆಸ್ಟ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ತೆಂಡೂಲ್ಕರ್ ಅವರನ್ನು 9 ಬಾರಿ ಔಟ್ ಮಾಡಿದ್ದಾರೆ ಆ್ಯಂಡರ್ಸನ್.
ಕೋವಿಡ್–19 ಸಾಂಕ್ರಾಮಿಕದ ವೇಳೆ (2021–2022ರಲ್ಲಿ) ನಡೆದಿದ್ದ ಕೊನೆಯ ಪಟೌಡಿ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ಹಾಗೂ ಭಾರತ 2 – 2 ಅಂತರದ ಡ್ರಾ ಸಾಧಿಸಿದ್ದವು. ಅದಕ್ಕೂ ಮೊದಲು (2018ರಲ್ಲಿ) ಇಂಗ್ಲೆಂಡ್ ತಂಡ ತವರಿನಲ್ಲಿ 4–1ರಲ್ಲಿ ಸರಣಿ ಜಯಿಸಿತ್ತು.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಗೆ ಮಾಜಿ ಕ್ರಿಕೆಟಿಗರಾದ ಮಾರ್ಟಿನ್ ಕ್ರೋವ್ (ನ್ಯೂಜಿಲೆಂಡ್) ಹಾಗೂ ಗ್ರಾಹಮ್ ಥಾರ್ಪ್ (ಇಂಗ್ಲೆಂಡ್) ಗೌರವಾರ್ಥ 'ಕ್ರೋವ್ – ಥಾರ್ಪ್ ಟ್ರೋಫಿ' ಎಂದು ಕಳೆದ ವರ್ಷ ಹೆಸರಿಡಲಾಗಿತ್ತು.
ಅದೇ ಹಾದಿಯಲ್ಲಿ ಈಗ ಇಂಗ್ಲೆಂಡ್ – ಭಾರತ ಸರಣಿಗೆ ಮರುನಾಮಕರಣ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.