ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿಕೆಟ್ ಕೀಪರ್‌ಗಳ ಶತಕ: ಧೋನಿ ದಾಖಲೆ ಮುರಿದ ಪಂತ್

ಪಿಟಿಐ
Published 21 ಜೂನ್ 2025, 15:23 IST
Last Updated 21 ಜೂನ್ 2025, 15:23 IST
<div class="paragraphs"><p>ಸಚಿನ್ ತೆಂಡೂಲ್ಕರ್, ರಿಷಬ್ ಪಂತ್, ಸುನಿಲ್ ಗವಾಸ್ಕರ್</p></div>

ಸಚಿನ್ ತೆಂಡೂಲ್ಕರ್, ರಿಷಬ್ ಪಂತ್, ಸುನಿಲ್ ಗವಾಸ್ಕರ್

   

ಲೀಡ್ಸ್‌: ಇಂಗ್ಲೆಂಡ್‌ನ ಶೋಯಬ್ ಬಶೀರ್‌ ಎಸೆತದಲ್ಲಿ ಅಮೋಘ ಸಿಕ್ಸ್‌ ಮೂಲಕ ಶತಕ ಸಿಡಿಸಿದ ರಿಷಬ್ ಪಂತ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಭಾರತದ ವಿಕೆಟ್‌ಕೀಪರ್‌ ಆಗಿ ಹೊರಹೊಮ್ಮಿದ್ದಾರೆ.

90 ಟೆಸ್ಟ್ ಆಡಿರುವ ಮಹೇಂದ್ರ ಸಿಂಗ್ ಧೋನಿ ಒಟ್ಟು 6 ಶತಕಗಳೊಂದಿಗೆ 4,876 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 33 ಅರ್ಧ ಶತಕವೂ ಸೇರಿದೆ. 38.09 ಸರಾಸರಿ ಹೊಂದಿರುವ ಧೋನಿ ಹೆಸರಿನಲ್ಲಿ ವಿಕೆಟ್‌ಕೀಪರ್ ಆಗಿ ಅತಿ ಹೆಚ್ಚು ಶತಕ ಸಾಧನೆಯ ದಾಖಲೆ ಶನಿವಾರದವರೆಗೂ ಇತ್ತು.

ADVERTISEMENT

ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರಿಷಬ್‌ ಪಂತ್‌ 178 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 12 ಬೌಂಡ್ರಿ ಸಹಿತ 134 ರನ್‌ಗಳನ್ನು ಕಲೆ ಹಾಕಿದರು. ಇದರೊಂದಿಗೆ 44 ಟೆಸ್ಟ್‌ನಲ್ಲಿ 44 ಸರಾಸರಿಯೊಂದಿಗೆ 15 ಅರ್ಧ ಶತಕ ಸಂಪಾದಿಸಿದ್ದಾರೆ. ಪಂತ್‌ ಸಾಧನೆಗೆ ಸಚಿನ್ ತೆಂಡೂಲ್ಕರ್‌ ಹಾಗೂ ಸುನಿಲ್ ಗವಾಸ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ 2024ರ ಸೆಪ್ಟೆಂಬರ್‌ನಲ್ಲಿ 109 ರನ್‌ಗಳನ್ನು ರಿಷಬ್ ಪಂತ್‌ ಕಲೆಹಾಕಿದ್ದರು. ಇದು ಅವರ 6ನೇ ಶತಕವಾಗಿತ್ತು.

ಅತಿ ಹೆಚ್ಚು ಶತಕ ಭಾರಿಸಿದ ವಿಕೆಟ್‌ಕೀಪರ್‌ಗಳಲ್ಲಿ ವೃದ್ಧಿಮಾನ್ ಸಾಹ ಅವರು ಮೂರನೇ ಸ್ಥಾನದಲ್ಲಿ, ಸೈಯದ್‌ ಕಿರ್ಮಾನಿ ಹಾಗೂ ಫರೂಕ್ ಎಂಜಿನಿಯರ್‌ ಎರಡನೇ ಸ್ಥಾನಗಳಲ್ಲಿದ್ದಾರೆ. ನಯನ್ ಮೋಂಗ್ಯಾ ಹೆಸರಿನಲ್ಲೂ ಒಂದು ಶತಕವಿದೆ.

ಚಾಕಚಕ್ಯತೆಯ ಆಟ: ಸಚಿನ್

‘ರಿಷಬ್ ಪಂತ್ ಆಟಕ್ಕೆ ತೆಂಡೂಲ್ಕರ್ ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಪೆಡಲ್ ಸ್ವೀಪ್‌ ತಂತ್ರವು ಅತ್ಯಂತ ಯೋಜಿತ ಮತ್ತು ಬುದ್ಧಿವಂತಿಕೆಯ ಆಟವಾಗಿತ್ತು. ಪಂತ್ ಮತ್ತು ಗಿಲ್‌ ಜತೆಯಾಟದಲ್ಲಿ ಇಂಗ್ಲೆಂಡ್‌ನ ಬಷೀರ್‌ ವಿರುದ್ಧ ಉತ್ತಮ ತಂತ್ರ ರೂಪಿಸಿ 209 ರನ್ ಕಲೆ ಹಾಕಿದರು. ಬಶೀರ್‌ ಬೌಂಲಿಂಗ್‌ನಲ್ಲಿ ಪಂತ್ ಮತ್ತು ಗಿಲ್‌ ಹಿಂದಿಯಲ್ಲಿ ಸಂಭಾಷಣೆ ನಡೆಸುತ್ತಿದ್ದ ಸನ್ನಿವೇಶ ಆಸಕ್ತಿದಾಯಕವಾಗಿತ್ತು’ ಎಂದು ಸಚಿನ್ ತೆಂಡೂಲ್ಕರ್‌ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಅದು ಕೇವಲ ಸಂಭಾಷಣೆಯಾಗಿರಲಿಲ್ಲ. ಬೌಲರ್‌ ಎದುರು ಇಬ್ಬರ ಮಾನಸಿಕ ಆಟವಾಗಿತ್ತು. ಇದು ಬೌಲರ್‌ನ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡುವ ಯತ್ನವಾಗಿತ್ತು. ಇವೆಲ್ಲವೂ ಟಿ.ವಿ. ಪರದೆಯಲ್ಲಿ ಕಾಣಸಿಗದು. ಆದರೆ ಆಟದ ಮೇಲೆ ಇವು ಪರಿಣಾಮ ಬೀರುವ ಸಂಗತಿಗಳೇ ಆಗಿವೆ’ ಎಂದು ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಮೂರ್ಖತನದಿಂದ ಅದ್ಭುತದೆಡೆಗೆ: ಗವಾಸ್ಕರ್

ಆಕಮ್ರಣ ಶೈಲಿಯ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವ ರಿಷಬ್‌ ಪಂತ್ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆ ಸರಣಿಯುದ್ದಕ್ಕೂ ಪಂತ್ ಅವರ ಹೊಡೆತಗಳ ಆಯ್ಕೆ ಕುರಿತು ಮಾಜಿ ಆಟಗಾರ ಸುನಿಲ್ ಗವಾಸ್ಕರ್‌ ಅವರು, ‘ಮೂರ್ಖತನ, ಮೂರ್ಖತನ, ಮೂರ್ಖತನ’ ಎಂದು ವೀಕ್ಷಕ ವಿವರಣೆಗಾರರ ಕೋಣೆಯಲ್ಲಿ ಟೀಕಿಸಿದ್ದರು.

ಆದರೆ ಶನಿವಾರದ ಪಂದ್ಯದಲ್ಲಿ ಪಂತ್ ಅವರ ಆಟವನ್ನು ಸುನಿಲ್ ಗವಾಸ್ಕರ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪಂತ್ ಶತಕ ಸಿಡಿಸಿ, ಲಾಗ ಹಾಕಿ ಸಂಭ್ರಮಿಸುತ್ತಿದ್ದಂತೆ, ‘ಅದ್ಭುತ, ಅದ್ಭುತ, ಅದ್ಭುತ’ ಎಂದು ಹರ್ಷ ಭೋಗ್ಲೆ ಜತೆಯಲ್ಲಿ ಉದ್ಘರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.