ADVERTISEMENT

ಟೆಸ್ಟ್ ರ‍್ಯಾಂಕಿಂಗ್: ಮತ್ತೆ ಅಗ್ರಪಟ್ಟಕ್ಕೆ ಸ್ಮಿತ್, ಎರಡನೇ ಸ್ಥಾನಕ್ಕೆ ಕೊಹ್ಲಿ

ಬೌಲಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಬೂಮ್ರಾ, ನಾಲ್ಕನೇ ಸ್ಥಾನ ಪಡೆದ ಆಲ್‌ರೌಂಡರ್ ರವೀಂದ್ರ

ಪಿಟಿಐ
Published 3 ಸೆಪ್ಟೆಂಬರ್ 2019, 18:41 IST
Last Updated 3 ಸೆಪ್ಟೆಂಬರ್ 2019, 18:41 IST
ಸ್ಟೀವನ್ ಸ್ಮಿತ್
ಸ್ಟೀವನ್ ಸ್ಮಿತ್   

ದುಬೈ:ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಅವರು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಭಾರತ ತಂಡದ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿರುವ ಪಟ್ಟಿಯ ಬೌಲರ್‌ಗಳ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ ಮೂರನೇ ಸ್ಥಾನಕ್ಕೇರಿದ್ದಾರೆ.

ವೆಸ್ಟ್ ಇಂಡೀಸ್ ಎದುರು ಜಮೈಕಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತದ ವಿರಾಟ್ ಮೊದಲ ಇನಿಂಗ್ಸ್‌ನಲ್ಲಿ 76 ರನ್ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಎದುರಿಸಿದ ಮೊದಲ ಎಸೆತದಲ್ಲಿಯೇ ಔಟ್ ಆಗಿದ್ದರು. ಇದರಿಂದಾಗಿ ಸ್ಮಿತ್ ಅವರು ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು.ಅವರು ಆ್ಯಷಸ್ ಸರಣಿಯಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ.ಸರಣಿಯ ಮೂರನೇ ಟೆಸ್ಟ್‌ನಲ್ಲಿ ಗಾಯದಿಂದಾಗಿ ಅವರು ಆಡಿರಲಿಲ್ಲ. ಬುಧವಾರ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ADVERTISEMENT

2015ರಿಂದ ಸುಮಾರು ಮೂರು ವರ್ಷಗಳ ಕಾಲ ಬಹುತೇಕ ಅವಧಿಯಲ್ಲಿ ಸ್ಮಿತ್ ಅಗ್ರಶ್ರೇಯಾಂಕದಲ್ಲಿದ್ದರು. 2018ರಲ್ಲಿ ಅವರು ಚೆಂಡು ವಿರೂಪ ಪ್ರಕರಣದಲ್ಲಿ ಅಮಾನತು ಶಿಕ್ಷೆ ಅನುಭವಿಸಿದ್ದರು. ಆಗ ಒಂದು ವರ್ಷ ಅವರು ಕ್ರಿಕೆಟ್‌ ಆಡಿರಲಿಲ್ಲ. ಈಚೆಗೆ ಅವರು ಶಿಕ್ಷೆ ಮುಗಿಸಿ ತಂಡಕ್ಕೆ ಮರಳಿದ್ದರು. ಆ್ಯಷಸ್ ಸರಣಿಯ ಒಂದೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಅವರು ಮತ್ತೆ ಅವರು ಮೊದಲ ಸ್ಥಾನದತ್ತ ದಾಪುಗಾಲಿಟ್ಟಿದ್ದರು.

ಇದೇ ವಿಭಾಗದಲ್ಲಿ ಭಾರತದ ಚೇತೇಶ್ವರ್ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಜಿಂಕ್ಯ ರಹಾನೆ ಕೂಡ ಏಳನೇ ಸ್ಥಾನಕ್ಕೇರಿದ್ದಾರೆ. ಅವರು ಒಟ್ಟು ನಾಲ್ಕು ಸ್ಥಾನಗಳ ಬಡ್ತಿ ಪಡೆದುಕೊಂಡಿದ್ದಾರೆ. ಅವರು ಆ್ಯಂಟಿಗಾ ಟೆಸ್ಟ್‌ನಲ್ಲಿ ಒಂದು ಅರ್ಧಶತಕ ಮತ್ತು ಒಂದು ಶತಕ ದಾಖಲಿಸಿದ್ದರು. ಜಮೈಕಾ ಟೆಸ್ಟ್‌ನಲ್ಲಿಯೂ ಅರ್ಧಶತಕ ಬಾರಿಸಿದ್ದರು.

ಬೌಲರ್‌ಗಳ ಪಟ್ಟಿಯಲ್ಲಿ ವೀಂಡಿಸ್‌ ವೇಗಿ ಜೇಸನ್ ಹೊಲ್ಡರ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ಭಾರತದ ಬೂಮ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಅವರು ವೆಸ್ಟ್‌ ಇಂಡೀಸ್‌ನ ಎರಡೂ ಟೆಸ್ಟ್‌ಗಳಲ್ಲಿ ಮಿಂಚಿದ್ದರು. ಬೂಮ್ರಾ, ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದ್ದರು. ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸಹಿತ ಆರು ವಿಕೆಟ್‌ಗಳನ್ನು ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅವರು ಅಗ್ರ ಶ್ರೇಯಾಂಕದಲ್ಲಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.