ADVERTISEMENT

IPL-2021 | RCB vs MI: ಇಬ್ಬರು ‘ನಾಯಕರ’ ಪರೀಕ್ಷೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು–ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮುಖಾಮುಖಿ ಇಂದು

ಪಿಟಿಐ
Published 25 ಸೆಪ್ಟೆಂಬರ್ 2021, 22:21 IST
Last Updated 25 ಸೆಪ್ಟೆಂಬರ್ 2021, 22:21 IST
ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ   

ದುಬೈ: ಭಾರತ ಟ್ವಿಂಟಿ–20 ಕ್ರಿಕೆಟ್ ತಂಡದ ನಾಯಕತ್ವ ಬಿಡಲಿರುವ ವಿರಾಟ್ ಕೊಹ್ಲಿ ನಂತರ ಆ ಸ್ಥಾನಕ್ಕೆ ಏರಲಿರುವ ರೋಹಿತ್ ಶರ್ಮಾ ಭಾನುವಾರ ಐಪಿಎಲ್ ಅಂಗಳದಲ್ಲಿ ಮುಖಾಮುಖಿಯಾಗಲಿದ್ದಾರೆ.

ವಿರಾಟ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ಮುನ್ನಡೆಸುತ್ತಿರುವ ಮುಂಬೈ ಇಂಡಿಯನ್ಸ್‌ ತಂಡಗಳಿಗೆ ಈ ಪಂದ್ಯ ಅಗ್ನಿಪರೀಕ್ಷೆಯಾಗಿದೆ. 14ನೇ ಆವೃತ್ತಿಯ ಎರಡನೇ ಹಂತದ ಟೂರ್ನಿಯಲ್ಲಿ ಉಭಯ ತಂಡಗಳು ಗೆಲುವಿನ ಮುಖ ನೋಡಿಲ್ಲ. ಆದರೆ, ಮೊದಲ ಹಂತದ ಸಾಧನೆಯಿಂದಾಗಿ ಆರ್‌ಸಿಬಿ 10 ಪಾಯಿಂಟ್‌ಗಳೊಂದಿಗೆ ಅಗ್ರ ನಾಲ್ಕರಲ್ಲಿದೆ. ಹಾಲಿ ಚಾಂಪಿಯನ್ ಮುಂಬೈ ಎಂಟು ಅಂಕಗಳೊಂದಿಗೆ ಅರನೇ ಸ್ಥಾನದಲ್ಲಿದೆ. ಎರಡೂ ತಂಡಗಳು ತಲಾ ಒಂಬತ್ತು ಪಂದ್ಯಗಳನ್ನು ಆಡಿವೆ.

ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ವಿರಾಟ್ ಮತ್ತು ದೇವದತ್ತ ಪಡಿಕ್ಕಲ್ ಶತಕದ ಜೊತೆಯಾಟ (111 ರನ್)ಆಡಿ ಅಮೋಘ ಆರಂಭ ನೀಡಿದ್ದರು. ಆದರೆ, ಅದರ ಮೇಲೆ ಬೃಹತ್ ಮೊತ್ತ ಪೇರಿಸುವಲ್ಲಿ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ವಿಶೇಷವಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿವಿಲಿಯರ್ಸ್‌ ತಮ್ಮ ನೈಜ ಲಯಕ್ಕೆ ಮರಳಿದರೆ ತಂಡದ ಚಿಂತೆ ದೂರವಾಗಬಹುದು.

ADVERTISEMENT

ಅರ್ಧಶತಕ ಗಳಿಸಿದ ವಿರಾಟ್ ಲಯಕ್ಕೆ ಮರಳಿರುವುದು ಸಮಾಧಾನ ಮೂಡಿಸಿದೆ. ಆದರೆ, ಹರ್ಷಲ್ ಪಟೇಲ್ ಮತ್ತು ಯಜುವೇಂದ್ರ ಚಾಹಲ್ ಅವರಿಗೆ ಉಳಿದ ಬೌಲರ್‌ಗಳ ಬೆಂಬಲವೂ ಸಿಕ್ಕರೆ ಎದುರಾಳಿ ತಂಡವನ್ನು ಕಟ್ಟಿಹಾಕುವುದು ಸುಲಭವಾಗಬಹುದು.

ಮುಂಬೈ ತಂಡದಲ್ಲಿಯೂ ಇಂತಹದೇ ಸಮಸ್ಯೆಗಳಿವೆ. ರೋಹಿತ್, ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡಿದರೂ, ಸೂರ್ಯಕುಮಾರ್ ಯಾದವ್ ಅವರ ಸ್ಥಿರತೆ ಚಿಂತೆಗೆ ಕಾರಣ. ಇಶಾನ್ ಕಿಶನ್, ಪೊವೆಲ್, ಕೃಣಾಲ್ ಪಾಂಡ್ಯ ಅವರ ಲಯವೂ ಅಸ್ಥಿರವಾಗಿದೆ. ಇದರಿಂದಾಗಿ ಬೌಲರ್‌ಗಳೇ ಪಂದ್ಯವಿಜಯಿಗಳಾಗುವ ಒತ್ತಡವಿದೆ. ಜಸ್‌ಪ್ರೀತ್ ಬೂಮ್ರಾ, ಆ್ಯಡಂ ಮಿಲ್ನೆ, ಟ್ರೆಂಟ್ ಬೌಲ್ಟ್ ಮತ್ತು ರಾಹುಲ್ ಚಾಹರ್ ಅವರ ಮೇಲೆ ನಿರೀಕ್ಷೆಯ ಭಾರವಿದೆ.

ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್‌ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಎಬಿ ಡಿವಿಲಿಯರ್ಸ್, ನವದೀಪ್ ಸೈನಿ, ಗ್ಲೆನ್ ಮ್ಯಾಕ್ಸ್‌ವೆಲ್, ಡ್ಯಾನ್ ಕ್ರಿಸ್ಟಿಯನ್, ರಜತ್ ಪಾಟೀದಾರ್, ದುಷ್ಮಂತಾ ಚಾಮೀರಾ, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ವನಿಂದು ಹಸರಂಗ, ಜಾರ್ಜ್ ಗಾರ್ಟನ್, ಯಜುವೇಂದ್ರ ಚಾಹಲ್, ಶಾಬಾಜ್ ಅಹಮದ್, ಕೈಲ್ ಜೆಮಿಸನ್, ಸುಯಶ್ ಪ್ರಭುದೇಸಾಯಿ, ಕೆ.ಎಸ್. ಭರತ್, ಟಿಮ್ ಡೇವಿಡ್, ಆಕಾಶದೀಪ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಅನುಕೂಲ್ ರಾಯ್, ಅರ್ಜುನ್ ತೆಂಡೂಲ್ಕರ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಜೇಮ್ಸ್ ನಿಶಾಮ್, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಆ್ಯಡಂ ಮಿಲ್ನೆ, ಜಸ್‌ಪ್ರೀತ್ ಬೂಮ್ರಾ, ನೇಥನ್ ಕೌಲ್ಟರ್‌ ನೈಲ್, ಪಿಯೂಷ್ ಚಾವ್ಲಾ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್.

ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಠಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.