ಸಿಡ್ನಿ: ಭಾರತ ಕ್ರಿಕೆಟ್ ತಂಡದಲ್ಲಿ ಇಬ್ಬರು ತಾರಾ ವರ್ಚಸ್ಸಿನ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವೈಫಲ್ಯದ ಸುತ್ತ ಬಹಳಷ್ಟು ಮಾತುಗಳು ಕೇಳಿಬರುತ್ತಿವೆ. ಅದರೊಂದಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅವರ ಸಿಬ್ಬಂದಿಯು ತಂಡವನ್ನು ನಿರ್ವಹಿಸುವ ರೀತಿಯ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.
ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತವು ತಂಡದ ಆಟಗಾರರ ಉತ್ತಮ ಸಂಯೋಜನೆ ಮಾಡಲು ಪರದಾಡುತ್ತಿದೆ. ಬಲಿಷ್ಠವಾಗಿರುವ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ತಕ್ಕ ಆಟಗಾರರು ಇರುವ ಬಳಗವನ್ನು ಆಯ್ಕೆ ಮಾಡುವಲ್ಲಿ ಹಿನ್ನಡೆಯಾಗಿದೆ.
ಪಂದ್ಯದಲ್ಲಿ ಘಟಿಸುತ್ತಿರುವ ಏರಿಳಿತಗಳು ಕ್ರೀಡಾಂಗಣದ ಹೊರಗೂ ತಂಡದ ಮೇಲೆ ಪರಿಣಾಮ ಬೀರುತ್ತಿವೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಎಲ್ಲವೂ ಸರಿಯಲ್ಲ ಎಂಬ ಪಿಸುಮಾತುಗಳಿವೆ.
ಆಟಗಾರರು ಈ ಹಿಂದೆ ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಅವರೊಂದಿಗೆ ಇದ್ದ ಬಾಂಧವ್ಯದ ರೀತಿಯು ಗೌತಮ್ ಗಂಭೀರ್ ಅವರೊಂದಿಗೆ ಇಲ್ಲ ಎಂದು ಹೇಳಲಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಅವರು ಆಟಗಾರರೊಂದಿಗೆ ವೈಯಕ್ತಿಕವಾಗಿ ಆಯ್ಕೆಯ ಕುರಿತು ಮಾತನಾಡುತ್ತಿದ್ದಾರೆನ್ನಲಾಗಿದೆ. ಆದರೆ ರೋಹಿತ್ ಅವರ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ.
‘ಭಾರತ ತಂಡವು ಇನ್ನೊಂದು ಟೆಸ್ಟ್ ಪಂದ್ಯ ಮತ್ತು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಬೇಕಿದೆ. ಆದರೆ ಅಟಗಾರರ ಸಾಮರ್ಥ್ಯದಲ್ಲಿ ವೃದ್ಧಿಯಾಗದಿದ್ದರೆ, ಗೌತಮ್ ಗಂಭೀರ್ ಅವರ ಸ್ಥಾನವೂ ಸುರಕ್ಷಿತವಲ್ಲ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಂಭೀರ್ ಹಾಗೂ ಆಯ್ಕೆ ಸಮಿತಿಯ ಸಂಬಂಧ ಯಾವ ರೀತಿಯಿದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಬಾರ್ಡರ್–ಗಾವಸ್ತರ್ ಟ್ರೋಫಿ ಸರಣಿಯಲ್ಲಿ ಹನ್ನೊಂದರ ಬಳಗದ ಆಯ್ಕೆಯಲ್ಲಿ ಬಹಳಷ್ಟು ಪ್ರಯೋಗಗಳು ನಡೆಯುತ್ತಿವೆ. ಇದರಿಂದಾಗಿ ತಂಡದಲ್ಲಿರುವ ಕೆಲವು ಆಟಗಾರರಿಗೆ ಅಭದ್ರತೆಯ ಭಾವವೂ ಕಾಡುತ್ತಿರಬಹುದು. ಈ ಪ್ರಯೋಗಗಳಲ್ಲಿ ಕೆಲವು ಸಫಲವಾಗಿವೆ. ನಿತೀಶ್ ಕುಮಾರ್ ರೆಡ್ಡಿಯ ಆಯ್ಕೆ ಇದಕ್ಕೆ ಉದಾಹರಣೆ. ಆದರೆ ಶುಭಮನ್ ಗಿಲ್ ಅವರ ವಿಷಯದಲ್ಲಿ ಇದನ್ನೇ ಹೇಳಲಾಗದು.
ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ತಂಡದ ಸಂಗತಿಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳುತ್ತಿದ್ದರು. ಇದೀಗ ಅವರು ಐಸಿಸಿ ಅಧ್ಯಕ್ಷರಾಗಿ ತೆರಳಿದ್ದಾರೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಕಾರ್ಯನೀತಿಯ ಕುರಿತು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲವೆನ್ನಲಾಗಿದೆ.
ಫೆಬ್ರುವರಿ–ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಅದರಲ್ಲಿ ಭಾರತವು ಉತ್ತಮವಾಗಿ ಆಡದಿದ್ದರೆ ಗಂಭೀರ್ ಸ್ಥಾನಕ್ಕೆ ಕಂಟಕ ಬರುವುದು ಬಹುತೇಕ ಖಚಿತ.
‘ಅವರು ಯಾವತ್ತೂ ಬಿಸಿಸಿಐಗೆ ಮೊದಲ ಆಯ್ಕೆ ಆಗಿರಲಿಲ್ಲ. ವಿದೇಶಗಳ ಖ್ಯಾತನಾಮ ಕೋಚ್‌ಗಳು ಮೂರು ಮಾದರಿಗಳಲ್ಲಿಯೂ ಕಾರ್ಯನಿರ್ವಹಿಸಲು ಸಿದ್ಧವಾಗಿರಲಿಲ್ಲ‘ ಎಂದು ಅಧಿಕಾರಿಗಳು ಹೇಳಿದರು.
ಈಚೆಗೆ ಭಾರತ ತಂಡವು ತವರಿನಲ್ಲಿ 0–3ರಿಂದ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಆಗಲೂ ಗಂಭೀರ್ ಅವರು ಬಹಳಷ್ಟು ಪ್ರಶ್ನೆಗಳನ್ನು ಎದುರಿಸಿದ್ದಾರೆ. ಈಗ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿ ಸೋತರೂ ದೆಹಲಿಯ ಗಂಭೀರ್ ಮತ್ತಷ್ಟು ಟೀಕೆಗಳನ್ನು ಎದುರಿಸಬೇಕಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.