ಹನಿಲ್ ಪಟೇಲ್
(ಚಿತ್ರ ಕೃಪೆ: ಐಸಿಸಿ)
ಬುಲಾವಯೊ (ಜಿಂಬಾಬ್ವೆ): ಮಧ್ಯಮ ವೇಗದ ಬೌಲರ್ ಹೆನಿಲ್ ಪಟೇಲ್ ಅವರ ಅಮೋಘ ದಾಳಿಯ ನೆರವಿನಿಂದ ಭಾರತ ತಂಡ, ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುರುವಾರ ಅಮೆರಿಕ ತಂಡದ ಮೇಲೆ ಡಿಎಲ್‌ಎಸ್ ಆಧಾರದಲ್ಲಿ ಆರು ವಿಕೆಟ್‌ಗಳ ಜಯಪಡೆಯಿತು.
ಒಂದು ಮೇಡನ್ ಇದ್ದ ಏಳು ಓವರುಗಳಲ್ಲಿ 16 ರನ್‌ಗಳಿಗೆ ಐದು ವಿಕೆಟ್ ಪಡೆದ ಹೆನಿಲ್ ಅಮೆರಿಕದ ಕುಸಿತಕ್ಕೆ ಪ್ರಮುಖ ಕಾರಣರಾದರು. ಅಮೆರಿಕ 35.2 ಓವರುಗಳಲ್ಲಿ ಕೇವಲ 107 ರನ್‌ಗಳಿಗೆ ಉರುಳಿತು. ಎರಡು ಬಾರಿ ಮಳೆಯ ವಿರಾಮ ಕಂಡ ‘ಬಿ’ ಗುಂಪಿನ ಈ ಪಂದ್ಯದಲ್ಲಿ ಭಾರತದ ಗೆಲುವಿನ ಗುರಿಯನ್ನು 37 ಓವರುಗಳಲ್ಲಿ 96 ರನ್‌ಗಳಿಗೆ ಪರಿಷ್ಕರಿಸಲಾಯಿತು.
ಭಾರತ ತಂಡ 4 ಓವರುಗಳಲ್ಲಿ 1 ವಿಕೆಟ್‌ಗೆ 21 ರನ್ ಗಳಿಸಿದ್ದಾಗ ಮಳೆ ಶುರುವಾಯಿತು. ಪಂದ್ಯ ಪುನರಾರಂಭದ ನಂತರ ಅಭಿಜ್ಞಾನ್ ಕುಂಡು ಅವರ ಅಜೇಯ 42 ರನ್‌ಗಳ (41 ಎಸೆತ) ನೆರವಿನಿಂದ ಭಾರತ 4 ವಿಕೆಟ್‌ಗೆ 99 ರನ್ ಬಾರಿಸಿ ಗೆಲುವು ಪೂರೈಸಿತು. ಆಗ ಇನ್ನೂ 118 ಎಸೆತಗಳು ಉಳಿದಿದ್ದವು.
ಮಳೆಯಾದ ಕಾರಣ ಭಾರತದ ಇನಿಂಗ್ಸ್ ತಡವಾಗಿ ಶುರುವಾಯಿತು. ಆದರೆ ತಂಡವು ಮೂರನೇ ಓವರಿನಲ್ಲೇ ಯುವ ತಾರೆ ವೈಭವ್ ಸೂರ್ಯವಂಶಿ ಅವರನ್ನು ಕಳೆದುಕೊಂಡಿತು. ರಿತ್ವಿಕ್ ಅಪ್ಪಿಡಿ (24ಕ್ಕೆ2) ಬೌಲಿಂಗ್‌ನಲ್ಲಿ ಮುನ್ನುಗ್ಗಿ ಹೊಡೆಯಲು ಹೋದಾಗ ಬ್ಯಾಟಿಗೆ ಚುಂಬಿಸಿದ ಚೆಂಡು ಸ್ಟಂಪ್‌ಗಳನ್ನು ಚದುರಿಸಿತು.
ನಾಯಕ ಆಯುಷ್ ಮ್ಹಾತ್ರೆ ಎರಡು ಬೌಂಡರಿಗಳನ್ನು ಬಾರಿಸಿ ವಿಶ್ವಾಸದಿಂದ ಇನಿಂಗ್ಸ್ ಆರಂಭಿಸಿದರು. ಈ ಹಂತದಲ್ಲಿ ಮತ್ತೆ ಮಳೆಯಾಯಿತು. ಭಾರತಕ್ಕೆ ಆ ವೇಳೆ 46 ಓವರುಗಳಲ್ಲಿ 87 ರನ್ ಗಳಿಸಬೇಕಿತ್ತು. ಆಟ ಮತ್ತೆ ಆರಂಭವಾದಾಗ ಗುರಿ ಪರಿಷ್ಕರಿಸಲಾಯಿತು. ಆದರೆ ತಂಡವು ಆಯುಷ್ (19) ಮತ್ತು ವೇದಾಂತ್ ತ್ರಿವೇದಿ (2) ಅವರನ್ನು ಅಲ್ಪ ಅವಧಿಯಲ್ಲಿ ಕಳೆದುಕೊಂಡಿತು. ಉಪನಾಯಕ ವಿಹಾನ್ ಮಲ್ಹೋತ್ರಾ (18) ಮತ್ತು ಅಭಿಜ್ಞಾನ್ ನಾಲ್ಕನೇ ವಿಕೆಟ್‌ಗೆ 45 ರನ್ ಸೇರಿಸಿ ಅಪಾಯ ತಪ್ಪಿಸಿದರು.
ಇದಕ್ಕೆ ಮೊದಲು ಹೆನಿಲ್ ತಮ್ಮ ಮೊದಲ ಓವರಿನಲ್ಲೇ ಅಮರಿಂದರ್ ಗಿಲ್ (1) ಅವರ ವಿಕೆಟ್ ಪಡೆದಿದ್ದರು. ನೀಳಕಾಯದ ವೇಗಿ ದೀಪೇಶ್ ದೇವೇಂದ್ರನ್ ಬೌಲಿಂಗ್‌ನಲ್ಲಿ ಇನ್ನೊಬ್ಬ ಆರಂಭ ಆಟಗಾರ ಸಾಹಿಲ್ ಗಾರ್ಗ್ (16) ಅವರು ಥರ್ಡ್‌ಮ್ಯಾನ್‌ನಲ್ಲಿದ್ದ ಹೆನಿಲ್‌ಗೆ ಕ್ಯಾಚಿತ್ತರು.
ನಾಯಕ ಉತ್ಕರ್ಷ್ ಶ್ರಿವಾಸ್ತವ (0) ಮತ್ತು ವಿಕೆಟ್ ಕೀಪರ್ ಅರ್ಜುನ್ ಮಹೇಶ್ (16) ಅವರ ವಿಕೆಟ್‌ಗಳೂ ಹೆನಿಲ್ ಪಾಲಾದವು. ಲೆಗ್ ಸ್ಪಿನ್ನರ್ ಖಿಲಾನ್ ಪಟೇಲ್ ಕೂಡ ದಾಳಿಗಿಳಿದ ಹಾಗೆಯೇ ಅಮೋಘ್ ಅರೇಪಳ್ಳಿ (3) ವಿಕೆಟ್ ಪಡೆದಾಗ ಅಮೆರಿಕದ ಮೊತ್ತ 16 ಓವರುಗಳಲ್ಲಿ 39ಕ್ಕೆ 5.
ನಿತೀಶ್ ಸುದಿನಿ 52 ಎಸೆತಗಳಲ್ಲಿ 36 ರನ್ ಹೊಡೆದು ಪ್ರತಿರೋಧ ತೋರಿದರು. ಅವರು ಆರನೇ ವಿಕೆಟ್‌ಗೆ 30 ರನ್ ಸೇರಿಸಿದರು. ಹೆನಿಲ್ ಎರಡನೇ ಸ್ಪೆಲ್‌ನಲ್ಲಿ ಮತ್ತೆರಡು ವಿಕೆಟ್ ಪಡೆದರು.
‘ಬಿ’ ಗುಂಪಿನಲ್ಲಿ ಭಾರತ, ಅಮೆರಿಕ ತಂಡಗಳ ಜೊತೆ ಬಾಂಗ್ಲಾದೇಶ ಮತ್ತ ನ್ಯೂಜಿಲೆಂಡ್ ತಂಡಗಳಿವೆ.
ಸಂಕ್ಷಿಪ್ತ ಸ್ಕೋರು:
ಅಮೆರಿಕ: 35.2 ಓವರುಗಳಲ್ಲಿ 107 (ನಿತೀಶ್ ಸುದಿನಿ 36; ಹೆನಿಲ್ ಪಟೇಲ್ 16ಕ್ಕೆ5);
ಭಾರತ: 17.2 ಓವರುಗಳಲ್ಲಿ 4 ವಿಕೆಟ್‌ಗೆ 99 (ಅಭಿಜ್ಞಾನ್ ಕುಂಡು ಔಟಾಗದೇ 42; ರಿತ್ವಿಕ್ ಅಪ್ಪಿಡಿ 24ಕ್ಕೆ2). ಪಂದ್ಯದ ಆಟಗಾರ: ಹೆನಿಲ್ ಪಟೇಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.