ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಕರ್ನಾಟಕ ಕ್ರಿಕೆಟ್ ಅಂಪೈರ್ಸ್ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಮಾಜಿ ಅಂಪೈರ್‌ಗಳನ್ನು ಗೌರವಿಸಲಾಯಿತು
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಭವನದಲ್ಲಿ ಕರ್ನಾಟಕ ಕ್ರಿಕೆಟ್ ಅಂಪೈರಿಂಗ್ ಪರಂಪರೆ ಅನಾವರಣಗೊಂಡಿತು. ಭಾರತದ ಕ್ರಿಕೆಟ್ ಕ್ಷೇತ್ರದ ಮಹತ್ವದ ವಿಶ್ವದಾಖಲೆಗಳಿಗೆ ಸಾಕ್ಷಿಯಾದ ‘ದಿಗ್ಗಜ ಅಂಪೈರ್’ಗಳು ಅಲ್ಲಿ ಸೇರಿದ್ದರು.
‘ಅಂಪೈರ್ ನಿರ್ಣಯವೇ ಅಂತಿಮ’ ಎಂಬ ಕಾಲಘಟ್ಟದಲ್ಲಿ ಕಠಿಣ ತೀರ್ಪುಗಳನ್ನು ನೀಡಿ ಸೈ ಎನಿಸಿಕೊಂಡವರು, ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಕಾಲದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದವರೂ ಅಲ್ಲಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಕರ್ನಾಟಕ ಕ್ರಿಕೆಟ್ ಅಂಪೈರ್ಸ್ ಸಂಸ್ಥೆ (ಎಸಿಯುಕೆ) ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟೆಸ್ಟ್ ಮತ್ತು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಕಾರ್ಯನಿರ್ವಹಿಸಿದ ಮಾಜಿ ಅಂಪೈರ್‌ಗಳನ್ನು ಗೌರವಿಸಲಾಯಿತು.
ಚೆನ್ನೈನಲ್ಲಿ (ಆಗಿನ ಮದ್ರಾಸ್) ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವು ಟೈ ಆದ ಐತಿಹಾಸಿಕ ಸಂದರ್ಭದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ವಿಕ್ರಂ ರಾಜು, ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್‌ನಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಗಳಿಸಿದಾಗ ಆಂಪೈರಿಂಗ್ ಮಾಡಿದ್ದ ಎ.ವಿ. ಜಯಪ್ರಕಾಶ್, ಗ್ವಾಲಿಯರ್‌ನಲ್ಲಿ ಸಚಿನ್ ತೆಂಡೂಲ್ಕರ್ ದ್ವಿಶತಕ ಗಳಿಸಿದ್ದಾಗ ಕಾರ್ಯನಿರ್ವಹಿಸಿದ್ದ ಶಾವೀರ್ ತಾರಾಪುರೆ, ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅನುಮೋದಿಸಿದ ಕ್ರಿಕೆಟ್ ನಿಯಮಗಳನ್ನು ಕನ್ನಡದಲ್ಲಿ ಪ್ರಕಟಿಸಿದ ಮೊದಲ ಲೇಖಕ, ಅಂಪೈರ್ ವಿನಾಯಕ ಕುಲಕರ್ಣಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಂಪೈರ್‌ಗಳಾದ ಬಿ.ಆರ್. ಕೇಶವಮೂರ್ತಿ, ಎ.ಎಲ್. ನರಸಿಂಹನ್ ಹಾಗೂ ಸಿ.ಕೆ. ನಂದನ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್, ಖಜಾಂಚಿ ಜಯರಾಮ್, ಎಸಿಯುಕೆ ಅಧ್ಯಕ್ಷ ಪ್ರಧಾನ್ ಕುಮಾರ್ ಅರಸ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸುಧಾಕರ್ ರಾವ್, ದೊಡ್ಡಗಣೇಶ್, ಕರ್ನಾಟಕ ರಣಜಿ ತಂಡದ ಮಾಜಿ ಆಟಗಾರಾದ ವಿಜಯಪ್ರಕಾಶ್, ರಘುನಾಥ್ ಬಿರಾಲಾ, ಬಿ.ಎಸ್. ವಿಶ್ವನಾಥ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.