ನವದೆಹಲಿ: ಕ್ಯಾನ್ಸರ್ ಗೆದ್ದು ಕ್ರಿಕೆಟ್‌ಗೆ ಮರಳಿದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಕ್ರಿಕೆಟ್ ಜೀವನ ಮೊಟಕುಗೊಳ್ಳಲು ಪರೋಕ್ಷವಾಗಿ ವಿರಾಟ್ ಕೊಹ್ಲಿ ಹೊಣೆಗಾರರು ಎಂದು ಭಾರತ ತಂಡದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ತಂಡಕ್ಕೆ ಮರಳಿ ಬಂದಾಗ ತಮಗೆ ಫಿಟ್ನೆಸ್‌ನಲ್ಲಿ ಕೆಲವು ರಿಯಾಯಿತಿ ನೀಡುವಂತೆ ಯುವಿ ಮನವಿ ಮಾಡಿದ್ದರು. ಇದಕ್ಕೆ ತಂಡದ ಆಗಿನ ನಾಯಕ ಕೊಹ್ಲಿ ಒಪ್ಪಿರಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.
ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ದೇಶ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ಯುವರಾಜ್ ಸಿಂಗ್, 2011ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ತಂಡ ಏಕದಿನ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ತಂಡದಲ್ಲಿ ಮರಳಿ ಸ್ಥಾನ ಸಂಪಾದಿಸಿದ್ದ ಯುವರಾಜ್ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕವನ್ನೂ ಬಾರಿಸಿದ್ದರು. ಆದರೆ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಪ್ಪೆ ಪ್ರದರ್ಶನದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. 2019ರಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.
ಲಲ್ಲನ್‌ಟಾಪ್ ಯು ಟ್ಯೂಬ್ ಚಾನೆಲ್‌ನಲ್ಲಿ ‘ಟೇಕ್ ಯುವಿ ಪಾ’ಸ್ ಇನ್‌ಸ್ಟೆನ್ಸ್’ ಶೀರ್ಷಿಕೆಯ ಸಂದರ್ಶನದಲ್ಲಿ ಉತ್ತಪ್ಪ ಈ ಮಾತುಗಳನ್ನಾಡಿದ್ದಾರೆ.
ಕ್ಯಾನ್ಸರ್ ಗೆದ್ದ ವ್ಯಕ್ತಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಯತ್ನಿಸಿದರು. ಇತರ ಆಟಗಾರರೊಂದಿಗೆ ನಮಗೆ ವಿಶ್ವಕಪ್ ಗೆಲ್ಲಿಸಿಕೊಟ್ಟವರು. ಹಾಗೆ ನೋಡಿದರೆ ಎರಡು ವಿಶ್ವಕಪ್ ಅವರಿದ್ದಾಗ ಭಾರತ ಗೆದ್ದಿತ್ತು ಎಂದಿದ್ದಾರೆ.
‘ನಿಮ್ಮ (ಯುವಿ) ಶ್ವಾಸಕೋಶದ ಸಾಮರ್ಥ್ಯ ಕ್ಷೀಣಿಸಿದೆ ಎಂದು ನೀವು ಹೇಳಿದ್ದೀರಿ. ಅವರು ಒದ್ದಾಡುತ್ತಿದ್ದಾಗ ನಾಯಕರಾಗಿ ಅದನ್ನು ನೋಡಿದವರು ನೀವು. ಇದನ್ನು ನನಗೆ ಬೇರೆ ಯಾರೂ ಹೇಳಲಿಲ್ಲ. ಇದನ್ನು ನಾನೇ ಗಮನಿಸಿದ್ದೆ’ ಎಂದು ರಾಬಿನ್ ಹೇಳಿದ್ದಾರೆ.
‘ನೀವು ಅವರ ಪರದಾಟ ನೋಡಿದ್ದೀರಿ. ನಾಯಕರಾಗಿ ನೀವು ಒಂದು ಮಟ್ಟ ಕಾಪಾಡಿಕೊಂಡಿದ್ದು ಸರಿ. ಆದರೆ ನಿಯಮಗಳಿಗೂ ಕೆಲವೊಮ್ಮೆ ಅಪವಾದಗಳಿರುತ್ತವೆ. ಅವರಿಗೆ ಆ ರಿಯಾಯಿತಿ ಕೊಡಬಹುದಿತ್ತು. ಏಕೆಂದರೆ ಅವರು ಟೂರ್ನಿಗಳನ್ನು ಗೆಲ್ಲಿಸಿಕೊಟ್ಟವರು, ಕ್ಯಾನ್ಸರ್ ಗೆದ್ದವರು’ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.