ಔಟಾಗಿ ನಿರಾಸೆಯಿಂದ ಹೆಜ್ಜೆ ಹಾಕಿದ ವಿರಾಟ್
– ಪಿಟಿಐ ಚಿತ್ರ
ನವದೆಹಲಿ: 13 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಮರಳಿದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. 15 ಎಸೆತಗಳನ್ನಷ್ಟೇ ಎದುರಿಸಿದರು. ಇದು ಅರುಣ್ ಜೇಟ್ಲಿ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆ ತರಿಸಿತು. ಅಲ್ಲದೆ ಅವರ ಫಾರ್ಮ್ ಬಗ್ಗೆ ಎದ್ದಿರುವ ಚರ್ಚೆಯ ಬೆಂಕಿಗೆ ತುಪ್ಪವೂ ಸುರಿದಿದೆ.
ರೈಲ್ವೆಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದ ವಿರಾಟ್ ಕೊಹ್ಲಿಗೆ ನೆರೆದಿದ್ದ ಪ್ರೇಕ್ಷಕರಿಂದ ಅಭೂತಪೂರ್ವ ಸ್ವಾಗತ ಲಭಿಸಿತು. ಪ್ರೇಕ್ಷಕರಿಂದ ‘ಆರ್‌ಸಿಬಿ… ಆರ್‌ಸಿಬಿ.. ಕೊಹ್ಲಿ…ಕೊಹ್ಲಿ’ ಎನ್ನುವ ಉದ್ಛೋಷ ಮೊಳಗಿಸಿದರು.
ರೈಲ್ವೆಸ್‌ನ ಪೇಸರ್ ಹಿಮಾಂಶು ಸಂಗ್ವಾನ್ ಎಸೆದ 28ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ ವಿರಾಟ್, ಉತ್ತಮ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದರು. ಆದರೆ ಮುಂದಿನ ಎಸೆತದಲ್ಲೇ ಅವರ ವಿಕೆಟ್‌ಗಳು ಕಿತ್ತು ಬಂದವು. ನಿರಾಸೆಯಿಂದ ವಿರಾಟ್ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಕಂಡಿದ್ದ ವಿರಾಟ್ ಅವರ ವೃತ್ತಿ ಜೀವನದ ಬಗ್ಗೆಯೇ ಪ್ರಶ್ನೆಗಳು ಎದ್ದಿದ್ದವು. ವಿರಾಟ್‌ರಂತೆ ಹಲವು ಆಟಗಾರರು ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ದೇಶಿ ಪಂದ್ಯಗಳನ್ನು ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿತ್ತು.
ಹೀಗಾಗಿ ವಿರಾಟ್ ದೆಹಲಿ ಪರ ರಣಜಿಗೆ ಆಡಿದ್ದರು. ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಸಂಜಯ್ ಬಾಂಗಾರ್ ಅವರಿಂದ ತರಬೇತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.