ADVERTISEMENT

Vijay Hazare Trophy| ಮಿಂಚಿದ ಪಡಿಕ್ಕಲ್, ಕರುಣ್: ಸೆಮಿಫೈನಲ್‌ಗೆ ಕರ್ನಾಟಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2026, 12:51 IST
Last Updated 12 ಜನವರಿ 2026, 12:51 IST
   

ಬೆಂಗಳೂರು: ವಿಜಯ್‌ ಹಜಾರೆ ಟ್ರೋಫಿಯ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ಮಳೆ ಬಂದಿದ್ದರಿಂದ ವಿಜೆಡಿ ನಿಯಮದ ಅನ್ವಯ ಕರ್ನಾಟಕ ತಂಡವು ಮುಂಬೈ ವಿರುದ್ಧ 55 ರನ್‌ಗಳ ಗೆಲುವು ದಾಖಲಿಸಿದೆ.

ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತ್ತು.

ಕರ್ನಾಟಕದ ಬೌಲರ್‌ಗಳ ಬಿಗಿ ದಾಳಿಯನ್ನು ಎದುರಿಸುವಲ್ಲಿ ಮುಂಬೈನ ಆರಂಭಿಕ ಬ್ಯಾಟರ್‌ಗಳು ವಿಫಲರಾದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶಮ್ಸ್ ಮುಲಾನಿ (86 ರನ್‌; 91 ಎಸೆತ) ಸಮಯೋಚಿತ ಆಟವಾಡಿದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಸಿರಾಜ್‌ ಪಟೇಲ್‌ ಅಜೇಯ 33 ರನ್‌(25 ಎಸೆತ) ಬಾರಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.

ADVERTISEMENT

ಮುಂಬೈ ತಂಡವು 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 254 ರನ್‌ ಗಳಿಸಿತು. ಕರ್ನಾಟಕದ ಪರ ವಿದ್ಯಾದರ ಪಾಟೀಲ್‌ 3 ವಿಕೆಟ್‌ ಹಾಗೂ ವಿದ್ವತ್‌ ಕಾವೇರಿಯಪ್ಪ, ಅಭಿಲಾಶ್‌ ಶೆಟ್ಟಿ ತಲಾ 2 ವಿಕೆಟ್‌ ಪಡೆದು ಮಿಂಚಿದರು.

255 ರನ್‌ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು ನಾಯಕ ಮಯಂಕ್ ಅಗರವಾಲ್‌ (12 ರನ್‌; 24 ಎಸೆತ) ವಿಕೆಟ್‌ ಬೇಗನೇ ಕಳೆದುಕೊಂಡಿತು. ಆದರೆ, ಉತ್ತಮ ಲಯದಲ್ಲಿರುವ ದೇವದತ್ತ ಪಡಿಕ್ಕಲ್ (ಅಜೇಯ 81 ರನ್‌: 95 ಎಸೆತ) ಹಾಗೂ ಕರುಣ್‌ ನಾಯರ್‌ ( ಅಜೇಯ 74 ರನ್‌: 80 ಎಸೆತ) ಉತ್ತಮ ಜೊತೆಯಾಟವಾಡಿದರು.

ಕರ್ನಾಟಕ ತಂಡದವು 33 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 187 ರನ್‌ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ, ವಿಜೆಡಿ ತೀರ್ಪಿನ ಮೂಲಕ 55 ರನ್‌ಗಳ ಗೆಲುವು ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿತು. ಜ.15ರಂದು ದೆಹಲಿ ಅಥವಾ ವಿದರ್ಭ ವಿರುದ್ಧ ಪಂದ್ಯ ಜರುಗಲಿದೆ.

ಎರಡನೇ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದ್ದರಿಂದ ಉತ್ತರ ಪ್ರದೇಶ ವಿರುದ್ಧ ಸೌರಷ್ಟ್ರ ತಂಡವು ವಿಜೆಡಿ ನಿಯಮದ ಅನ್ವಯ 17 ರನ್‌ಗಳ ಗೆಲುವು ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.