ADVERTISEMENT

ವಿಜಯ್ ಹಜಾರೆ ಕ್ರಿಕೆಟ್ | ವಿಶ್ವರಾಜ್ ಜಡೇಜ  ಶತಕ: ಫೈನಲ್‌ಗೆ ಸೌರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 17:36 IST
Last Updated 16 ಜನವರಿ 2026, 17:36 IST
<div class="paragraphs"><p>ಸೌರಾಷ್ಟ್ರದ ಹರ್ವಿಕ್ ದೇಸಾಯಿ ಮತ್ತು ವಿಶ್ವರಾಜ್ ಜಡೇಜ&nbsp; </p></div>

ಸೌರಾಷ್ಟ್ರದ ಹರ್ವಿಕ್ ದೇಸಾಯಿ ಮತ್ತು ವಿಶ್ವರಾಜ್ ಜಡೇಜ 

   

 –ಪಿಟಿಐ ಚಿತ್ರ

ಬೆಂಗಳೂರು: ಶುಕ್ರವಾರ ಮುಸ್ಸಂಜೆಯಲ್ಲಿ ಕಚಗುಳಿಯಿಡುವ ಚಳಿಯಲ್ಲಿ  ಆರಂಭಿಕ ಬ್ಯಾಟರ್ ವಿಶ್ವರಾಜ್ ಜಡೇಜ ಅಮೋಘ ಶತಕ ದಾಖಲಿಸಿದರು. ಅವರ ಆಟದ ಬಲದಿಂದ ಸೌರಾಷ್ಟ್ರ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು. 

ADVERTISEMENT

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರವು ವಿದರ್ಭ ತಂಡವನ್ನು ಎದುರಿಸಲಿದೆ. ಗುರುವಾರ ನಡೆದಿದ್ದ ಮೊದಲ ಸೆಮಿಫೈನಲ್‌ನಲ್ಲಿ ವಿದರ್ಭ ತಂಡವು ಕರ್ನಾಟಕದ ಎದುರು ಗೆದ್ದಿತ್ತು. 

ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ಪಂಜಾಬ್ ತಂಡವು ಒಡ್ಡಿದ 292ರನ್‌ಗಳ ಗೆಲುವಿನ ಗುರಿಯನ್ನು  ಬೆನ್ನಟ್ಟಿದ ಸೌರಾಷ್ಟವು 9 ವಿಕೆಟ್‌ಗಳ ಜಯ ಸಾಧಿಸಲು ವಿಶ್ವರಾಜ್ (ಅಜೇಯ 161; 126ಎ, 4X17, 6X3) ಶತಕ ಕಾರಣವಾಯಿತು. ಅವರು ಮತ್ತು ನಾಯಕ ಹರ್ವಿಕ್ ದೇಸಾಯಿ (64; 63ಎ, 4X9) ಮೊದಲ ವಿಕೆಟ್ ಜೊತೆಯಾಟದಲ್ಲಿ 23 ಓವರ್‌ಗಳಲ್ಲಿ 167 ರನ್ ಸೇರಿಸಿದರು. ಇದರಿಂದಾಗಿ ಜಯ ಸುಲಭವಾಯಿತು.  ಎರಡು ಸಲದ ಚಾಂಪಿಯನ್ ಸೌರಾಷ್ಟ್ರವು ಗೆಲುವಿನ ಗುರಿ ಸಾಧಿಸಿದಾಗ ಇನ್ನೂ 10.3 ಓವರ್‌ಗಳಲ್ಲಿ ಬಾಕಿ ಇದ್ದವು. 

27 ವರ್ಷದ ಜಡೇಜ ಅವರು ಪಂಜಾಬ್ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಫ್ಲಿಕ್, ಕಟ್ ಮತ್ತು ಡ್ರೈವ್‌ಗಳನ್ನು ಆರಂಭದಿಂದಲೇ ಪ್ರಯೋಗಿಸಿದರು.  ಅವರು 120 ರನ್ ಗಳಿಸಿದ್ದ ಸಮದರ್ಭದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಫೀಲ್ಡರ್ ಕ್ಯಾಚ್ ಕೈಚೆಲ್ಲಿದರು. 

ಟಾಸ್ ಗೆದ್ದ ಸೌರಾಷ್ಟ್ರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನ್ಮೋಲ್ ಪ್ರೀತ್ ಸಿಂಗ್ (100; 105ಎ, 4X9, 6X1) ಶತಕ ಮತ್ತು ಪ್ರಭಸಿಮ್ರನ್ ಸಿಂಗ್ (87; 89ಎ, 4X9, 6X3) ಅರ್ಧಶತಕದ ಬಲದಿಂದ ಪಂಜಾಬ್ ತಂಡವು 50 ಓವರ್‌ಗಳಲ್ಲಿ 291 ರನ್ ಗಳಿಸಿತು. ಸೌರಾಷ್ಟ್ರದ ವೇಗಿ ಚೇತನ್ ಸಕಾರಿಯಾ (60ಕ್ಕೆ4), ಅಂಕುರ್ ಪನ್ವರ್ (54ಕ್ಕೆ2) ಮತ್ತು ಚಿರಾಗ್ ಜಾನಿ (73ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು. 

ಸಂಕ್ಷಿಪ್ತ ಸ್ಕೋರು:

ಪಂಜಾಬ್: 50 ಓವರ್‌ಗಳಲ್ಲಿ 291 (ಹರ್ನೂರ್ ಸಿಂಗ್ 33, ಪ್ರಭಸಿಮ್ರನ್ ಸಿಂಗ್ 87, ಅನ್ಮೋಲ್‌ಪ್ರೀತ್ ಸಿಂಗ್ 100, ರಮಣದೀಪ್ ಸಿಂಗ್ 42, ಚೇತನ್ ಸಕಾರಿಯಾ 60ಕ್ಕೆ4, ಅಂಕುರ್ ಪನ್ವರ್ 54ಕ್ಕೆ2, ಚಿರಾಗ್ ಜಾನಿ 73ಕ್ಕೆ2)

ಸೌರಾಷ್ಟ್ರ: 39.3 ಓವರ್‌ಗಳಲ್ಲಿ 1 ವಿಕೆಟ್‌ಗೆ 293 (ಹರ್ವಿಕ್ ದೇಸಾಯಿ 64, ವಿಶ್ವರಾಜ್ ಜಡೇಜ ಔಟಾಗದೇ 165, ಪ್ರೇರಕ್ ಮಂಕಡ್ ಔಟಾಗದೇ 52) ಸೌರಾಷ್ಟ್ರ ತಂಡಕ್ಕೆ 9 ವಿಕೆಟ್‌ ಜಯ.  ಪಂದ್ಯದ ಆಟಗಾರ: ವಿಶ್ವರಾಜ್ ಜಡೇಜ. 

ಫೈನಲ್: ವಿದರ್ಭ–ಸೌರಾಷ್ಟ್ರ (ಜ.18)

ಸ್ಥಳ: ಬಿಸಿಸಿಐ ಸಿಒಇ ಮೈದಾನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.