ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಯಶಸ್ಸಿನ ನಿಟ್ಟಿನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರು ಲಯಕ್ಕೆ ಮರಳುವುದು ಅತ್ಯಂತ ನಿರ್ಣಾಯಕವೆನಿಸಲಿದೆ ಎಂದು ಮಾಜಿ ಆಟಗಾರ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಿನ ಸರಣಿಗಳಲ್ಲಿ ರೋಹಿತ್ ಹಾಗೂ ಕೊಹ್ಲಿ ವೈಫಲ್ಯವನ್ನು ಅನುಭವಿಸಿದ್ದರು.
2023ರ ಏಕದಿನ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅವರ ಸ್ಟ್ರೈಕ್‌ರೇಟ್‌ನಲ್ಲಿ ಧನಾತ್ಮಕ ಬದಲಾವಣೆ ಆಗಿದೆ. ಏಕದಿನದಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ ಎಂದು ಅವರು ಹೇಳಿದ್ದಾರೆ.
'ಐಸಿಸಿ ಟೂರ್ನಿಗಳಲ್ಲಿ ರೋಹಿತ್ ಹಾಗೂ ಕೊಹ್ಲಿ ಹಿಂದಿನ ಪ್ರದರ್ಶನವನ್ನು ಗಮನಿಸಿದಾಗ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತದೆ. ಒಬ್ಬರನ್ನೊಬ್ಬರು ನೆಚ್ಚಿಕೊಂಡು ಆಡುತ್ತಾರೆ. ದೊಡ್ಡ ಮೊತ್ತ ಪೇರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಒಂದು ವೇಳೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾದರೆ ಭಾರತದ ಚಾಂಪಿಯನ್ಸ್ ಟ್ರೋಫಿ ಅಭಿಯಾನವು ಉತ್ತಮವಾಗಿರಲಿದೆ' ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಭಾಗವಹಿಸಲಿದೆ. ಈ ಸರಣಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಲಯಕ್ಕೆ ಮರಳುವ ವಿಶ್ವಾಸವನ್ನು ರೈನಾ ವ್ಯಕ್ತಪಡಿಸಿದ್ದಾರೆ.
'ರೋಹಿತ್ ಆಕ್ರಮಣಕಾರಿಯಾಗಿ ಆಡುವುದನ್ನು ಮುಂದುವರಿಸಬೇಕು. ಹಾಗಾದರೆ ಅದರ ಪ್ರಭಾವ ನಾಯಕತ್ವದ ಮೇಲೂ ಉಂಟಾಗುತ್ತದೆ. ಇನ್ನೊಂದೆಡೆ ಏಕದಿನ ಆಟದ ವಿಚಾರಕ್ಕೆ ಬಂದಾಗ ಕೊಹ್ಲಿ ಸ್ವಯಂಚಾಲಿತರಾಗಿ ವಿಭಿನ್ನ ಹಂತದಲ್ಲಿರುತ್ತಾರೆ' ಎಂದು ಹೇಳಿದ್ದಾರೆ.
ಪಾಕಿಸ್ತಾನದ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೆಬ್ರುವರಿ 19ರಂದು ಆರಂಭವಾಗಿ ಮಾರ್ಚ್ 9ರವರೆಗೆ ನಡೆಯಲಿದೆ. ಭಾರತ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ. 'ಎ' ಗುಂಪಿನಲ್ಲಿರುವ ಭಾರತ ಇದೇ ಗುಂಪಿನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳೊಂದಿಗೆ ಸೆಣಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.