
ಬೆಂಗಳೂರು: ವಿರಾಟ್ ಕೊಹ್ಲಿ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಮಾದರಿಗಳಿಂದ ನಿವೃತ್ತರಾಗಿದ್ದಾರೆ. ಆದರೆ ಅವರ ರನ್ ಗಳಿಕೆಯ ಹಸಿವು ಮಾತ್ರ ಕಡಿಮೆಯಾಗಿಲ್ಲ.
37 ವರ್ಷದ ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ ಅವರು ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಕಳೆದ ಆರು ಇನಿಂಗ್ಸ್‌ಗಳಲ್ಲಿ 50 ರನ್‌ಗಳಿಗಿಂತ ಹೆಚ್ಚಿನ ಸ್ಕೋರ್ ಗಳಿಸಿದ್ದಾರೆ. ಅದರಲ್ಲಿ ಆಸ್ಟ್ರೇಲಿಯಾ ಎದುರಿನ ಅರ್ಧಶತಕ, ದಕ್ಷಿಣ ಆಫ್ರಿಕಾ ಎದುರಿನ ಎರಡು ಶತಕಗಳು ಮತ್ತು ಒಂದು ಅರ್ಧಶತಕ ಸೇರಿವೆ. ಎರಡು ದಿನಗಳ ಹಿಂದೆ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಂಧ್ರದ ಎದುರಿನ ಶತಕ ಮತ್ತು ಶುಕ್ರವಾರ ಗುಜರಾತ್ ಎದುರಿನ 77 ರನ್‌ಗಳ ಇನಿಂಗ್ಸ್ ಕೂಡ ಮಹತ್ವದ್ದಾಗಿವೆ. ಅಂತರರಾಷ್ಟ್ರೀಯ ಮತ್ತು ದೇಶಿ ಟೂರ್ನಿಗಳಲ್ಲಿ ಅವರ ‘ಓಟ’ ಮುಂದುವರಿದಿದೆ.
ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಎ ಗುಂಪಿನ ಎರಡನೇ ಪಂದ್ಯದಲ್ಲಿ ದೆಹಲಿ ತಂಡವು 7 ರನ್‌ಗಳಿಂದ ರೋಚಕ ಜಯ ಸಾಧಿಸಿತು.
ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಮತ್ತು ನಾಯಕ ರಿಷಭ್ ಪಂತ್ (70; 79ಎ, 4X8, 6X2) ಅವರ ಚೆಂದದ ಬ್ಯಾಟಿಂಗ್ ಬಲದಿಂದ ದೆಹಲಿ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 254 ರನ್ ಗಳಿಸಿತು. ಅದಕ್ಕುತ್ತರವಾಗಿ ದಿಟ್ಟ ಹೋರಾಟ ಮಾಡಿದ ಗುಜರಾತ್ ತಂಡವು 47.4 ಓವರ್‌ಗಳಲ್ಲಿ 247 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಆರ್ಯ ದೇಸಾಯಿ (57; 77ಎ, 4X8, 6X2) ಹಾಗೂ ಸೌರವ್ ಚೌಹಾಣ್ (49; 43ಎ, 4X5, 6X2) ಅವರ ಬ್ಯಾಟಿಂಗ್‌ಗೆ ಗೆಲುವು ಒಲಿಯಲಿಲ್ಲ. ತಂಡದ ವಿಶಾಲ್ ಜೈಸ್ವಾಲ್ (42ಕ್ಕೆ4 ಹಾಗೂ 26 ರನ್) ಆಲ್‌ರೌಂಡ್ ಆಟವಾಡಿದರು. 41.4 ಓವರ್‌ಗಳಲ್ಲಿ ತಂಡವು 213 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಈ ಹಂತದಿಂದ 34 ರನ್‌ಗಳ ಅಂತರದೊಳಗೆ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನತ್ತ ಸಾಗಿತು. ದೆಹಲಿ ತಂಡದ ಪ್ರಿನ್ಸ್ ಯಾದವ್ (37ಕ್ಕೆ3), ಇಶಾಂತ್ ಶರ್ಮಾ (28ಕ್ಕೆ2) ಮತ್ತು ಅರ್ಪಿತ್ ರಾಣಾ (39ಕ್ಕೆ2) ಎದುರಾಳಿಗಳನ್ನು ಕಟ್ಟಿಹಾಕಿದರು.
ದೆಹಲಿ ತಂಡಕ್ಕೆ ಗುಜರಾತ್ ಬೌಲರ್ ಚಿಂತನ್ ಗಜ ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಪ್ರಿಯಾಂಶ್ ಆರ್ಯ ಅವರ ವಿಕೆಟ್ ಗಳಿಸಿದರು. ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು. ಮೈದಾನದಲ್ಲಿದ್ದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಕಂಪೌಂಡ್ ಹೊರಗಿನಿಂದ ನೋಡಲು ಸಾಹಸಪಡುತ್ತಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಈ ದಿನವೂ ಹೆಚ್ಚು ಸಂಖ್ಯೆಯಲ್ಲಿದ್ದ ಪೊಲೀಸರು ಭದ್ರತಾ ಕಾರ್ಯ ನಿರ್ವಹಿಸಿದರು.
ಪವರ್‌ಪ್ಲೇನಲ್ಲಿ ವಿರಾಟ್ ವೇಗವಾಗಿ ರನ್ ಗಳಿಸಿದರು. 61 ಎಸೆತಗಳಲ್ಲಿ 77 ರನ್ ಗಳಿಸಿದರು. 13 ಬೌಂಡರಿ ಮತ್ತು 1 ಸಿಕ್ಸರ್ ಅದರಲ್ಲಿದ್ದವು. ಶತಕದತ್ತ ಸಾಗಿದ್ದ ಅವರು ಜೈಸ್ವಾಲ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನಿಸಿ ಬೀಟ್ ಆದರು. ವಿಕೆಟ್‌ಕೀಪರ್ ಊರ್ವಿಲ್ ಪಟೇಲ್ ಚುರುಕಾಗಿ ಸ್ಟಂಪಿಂಗ್ ಮಾಡಿದರು.
ಆಗ ರಿಷಭ್ ಪಂತ್ ಇನಿಂಗ್ಸ್ ಹೊಣೆ ಹೊತ್ತುಕೊಂಡರು. ಆರಂಭದಲ್ಲಿ ನಿಧಾನವಾಗಿ ಆಡಿದರೂ ನಂತರ ವೇಗ ಹೆಚ್ಚಿಸಿದರು. 8 ಬೌಂಡರಿ, 2 ಸಿಕ್ಸರ್ ಹೊಡೆದರು.ಅವರ ವಿಕೆಟ್ ಕೂಡ ಜೈಸ್ವಾಲ್ ಪಾಲಾಯಿತು.
ಕೊನೆ ಹಂತದ ಓವರ್‌ಗಳಲ್ಲಿ ಹರ್ಷ ತ್ಯಾಗಿ (40; 47ಎ, 4X2, 6X1) ಬೀಸಾಟವಾಡಿದರು. ಅದರಿಂದಾಗಿ ಹೋರಾಟದ ಮೊತ್ತ ಪೇರಿಸಲು ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರು: ದೆಹಲಿ: 50 ಓವರ್‌ಗಳಲ್ಲಿ 9ಕ್ಕೆ254 (ವಿರಾಟ್ ಕೊಹ್ಲಿ 77, ರಿಷಭ್ ಪಂತ್ 70, ಹರ್ಷ ತ್ಯಾಗಿ 40, ರವಿ ಬಿಷ್ಣೋಯಿ 50ಕ್ಕೆ2, ವಿಶಾಲ್ ಜೈಸ್ವಾಲ್ 42ಕ್ಕೆ4) ಗುಜರಾತ್:47.4 ಓವರ್‌ಗಳಲ್ಲಿ 247 (ಆರ್ಯ ದೇಸಾಯಿ 57, ಊರ್ವಿಲ್ ಪಟೇಲ್ 31, ಅಭಿಷೇಕ್ ದೇಸಾಯಿ 26, ಎಸ್.ಡಿ. ಚೌಹಾಣ್49, ವಿಶಾಲ್ ಜೈಸ್ವಾಲ್ 26, ಪ್ರಿನ್ಸ್ ಯಾದವ್ 37ಕ್ಕೆ3, ಅರ್ಪಿತ್ ರಾಣಾ 39ಕ್ಕೆ2, ಇಶಾಂತ್ ಶರ್ಮಾ 28ಕ್ಕೆ2) ಫಲಿತಾಂಶ:ದೆಹಲಿ ತಂಡಕ್ಕೆ 7 ರನ್ ಜಯ. ಪಂದ್ಯದ ಆಟಗಾರ: ವಿರಾಟ್ ಕೊಹ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.