ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಚೆನ್ನೈ: ಕ್ರಿಕೆಟ್ ಲೋಕದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಆಟದ ಮೇಲೆ ಹೊಂದಿರುವ ಬದ್ಧತೆಯು ಅನುಕರಣೀಯವಾಗಿದ್ದು, ಸಹ ಆಟಗಾರರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (ಡಿಕೆ) ಶ್ಲಾಘಿಸಿದ್ದಾರೆ.
ಭಾರತ ಹಾಗೂ ಆರ್‌ಸಿಬಿಯ ಮಾಜಿ ವಿಕೆಟ್‌ಕೀಪರ್–ಬ್ಯಾಟರ್ ಆಗಿರುವ ಡಿಕೆ, ಕೊಹ್ಲಿ ಅವರಲ್ಲಿ ರನ್ ಗಳಿಸುವ ಹಸಿವು ಎಂದಿನಂತೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಆರ್‌ಸಿಬಿ ಇಂದು (ಶುಕ್ರವಾರ) ಸಂಜೆ ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸವಾಲು ಎದುರಿಸಲು ಸಜ್ಜಾಗಿದೆ.
ಪಂದ್ಯಕ್ಕೂ ಮುನ್ನ ಮಾತನಾಡಿರುವ ಡಿಕೆ, 'ಅಭ್ಯಾಸದಿಂದ ನಾನು ಹೊರಗೆ ಬಂದ ನಂತರವೂ, ಕೊಹ್ಲಿ ಮತ್ತೊಂದು ಹೊಡೆತ ಪ್ರಯೋಗಿಸಲು ಬಯಸುತ್ತಾರೆ. ಈ ಸಮಯದಲ್ಲಿ (36ನೇ ವಯಸ್ಸಿನಲ್ಲಿ) ಆ ರೀತಿ ಆಟವಾಡುವುದು ಅವರಲ್ಲಿನ ರನ್ ದಾಹವನ್ನು ತೋರಿಸುತ್ತದೆ. ಅವರು, ಇನ್ನಷ್ಟು ಸುಧಾರಣೆ ಸಾಧಿಸಿ, ತಮ್ಮ ಸಾಮರ್ಥ್ಯದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸದಾ ಬಯಸುತ್ತಾರೆ. ಹಾಗಾಗಿಯೇ, ಅವರು ವಿಶೇಷ ಆಟಗಾರ. ನಾನು ನೋಡಿದಂತೆ ಕೊಹ್ಲಿ ಈ (36ನೇ) ವಯಸ್ಸಿನಲ್ಲೂ ಐಪಿಎಲ್‌ನಲ್ಲಿ ಹಿಂದೆಂದೂ ಆಡದಷ್ಟು ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಪಿನ್ ಬೌಲಿಂಗ್ ವಿರುದ್ಧ ಕೊಹ್ಲಿ ಬ್ಯಾಟಿಂಗ್ ಕುರಿತು ಮಾಧ್ಯಮದವರು ಕೇಳಿದ್ದಕ್ಕೆ, 'ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಉತ್ತಮವಾಗಿ ರನ್ ಗಳಿಸುತ್ತಿದ್ದಾರೆ. ಸ್ಪಿನ್ ವಿರುದ್ಧ ಚೆನ್ನಾಗಿ ಆಡದಿದ್ದರೆ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ ರನ್ (765) ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದ ಕೊಹ್ಲಿ, ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 218 ರನ್ ಗಳಿಸುವ ಮೂಲಕ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರು.
ಈ ಬಾರಿ ರಜತ್ ಪಾಟೀದಾರ್ ನಾಯಕತ್ವ ವಹಿಸಿರುವ ಆರ್‌ಸಿಬಿಗೆ ಚೆನ್ನೈನಲ್ಲಿ ಇಂದು ರಾತ್ರಿ ಮತ್ತೊಮ್ಮೆ ಸ್ಪಿನ್ ಸವಾಲು ಎದುರಾಗಲಿದೆ. ಸಿಎಸ್‌ಕೆ ಕಳೆದ 16 ವರ್ಷಗಳಿಂದ ಆರ್‌ಸಿಬಿ ಎದುರು ತವರಿನಲ್ಲಿ ಒಮ್ಮೆಯೂ ಸೋತಿಲ್ಲ.
ಎದುರಾಳಿ ತಂಡದ ಸ್ಪಿನ್ ಬಲದ ಕುರಿತು, 'ಸಿಎಸ್‌ಕೆ ತಂಡದಲ್ಲಿ ಮೂವರು ಉತ್ತಮ ಸ್ಪಿನ್ನರ್‌ಗಳಿದ್ದಾರೆ. ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ, ನಮ್ಮಲ್ಲಿ ಅತ್ಯುತ್ತಮ ಹಾಗೂ ಸಮರ್ಥ ಬ್ಯಾಟರ್‌ಗಳಿದ್ದಾರೆ. ಅವರ ಮೇಲೆ ವಿಶ್ವಾಸವಿದೆ. ಸ್ಪಿನ್ ಎದುರು ಹೇಗೆ ಆಡುತ್ತಾರೆ ಎಂಬುದರ ಆಧಾರದಲ್ಲಿಯೇ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ' ಎಂದು ಖಚಿತವಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.