ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ
ಪಿಟಿಐ ಚಿತ್ರ
ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು, ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರೋಹಿತ್ ಶರ್ಮಾ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ನಾಳೆ ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಮಾತನಾಡಿರುವ ಒಂದೂವರೆ ನಿಮಿಷದ ವಿಡಿಯೊವನ್ನು ಆರ್‌ಸಿಬಿ ತನ್ನ ಎಕ್ಸ್/ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.
ರೋಹಿತ್ ಶರ್ಮಾ ಸದ್ಯ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಅವರಿಗೂ ಮುನ್ನ ಕೊಹ್ಲಿ ಟೀಂ ಇಂಡಿಯಾ ಮುನ್ನಡೆಸಿದ್ದರು. ಹೀಗಾಗಿ, ಹಲವು ವರ್ಷಗಳಿಂದ ಒಂದೇ ತಂಡದಲ್ಲಿ ಒಟ್ಟಿಗೆ ಆಡಿದ್ದಾರೆ.
ನೀವು ಯಾರೊಂದಿಗಾದರೂ ಬಹಳ ಸಮಯದಿಂದ ಒಟ್ಟಿಗೆ ಆಡಿದಾಗ, ಆಟದ ಕುರಿತ ಹಲವು ವಿಚಾರಗಳನ್ನು ಹಂಚಿಕೊಳ್ಳುವುದು ಹಾಗೂ ಒಂದೇ ಸಮಯದಲ್ಲಿ ವೃತ್ತಿ ಜೀವನ ಆರಂಭಿಸಿ ಮುನ್ನಡೆಯುವ ಹೊತ್ತಿನಲ್ಲಿ ಎಲ್ಲ ರೀತಿಯ ಪ್ರಶ್ನೆಗಳನ್ನು ಪರಸ್ಪರ ಕೇಳಿಕೊಳ್ಳುವುದು ಸ್ವಾಭಾವಿಕ ಪ್ರಕ್ರಿಯೆಯಾಗಿರುತ್ತದೆ ಎಂದು ವಿರಾಟ್ ಹೇಳಿದ್ದಾರೆ.
ತಂಡದ ನಾಯಕತ್ವದ ವಿಚಾರದಲ್ಲಿ ನಾವಿಬ್ಬರೂ ಬಹಳ ನಿಕಟವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ, ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೇವೆ. ಯಾವುದೇ ನಿರ್ದಿಷ್ಠ ಪರಿಸ್ಥಿತಿ ಅಥವಾ ಪಂದ್ಯದ ಸಂದರ್ಭದಲ್ಲಿ ನಮ್ಮಿಬ್ಬರ ನಿಲುವುಗಳು ಹೆಚ್ಚೂ ಕಡಿಮೆ ಒಂದೇ ಆಗಿರುತ್ತವೆ ಎಂದಿದ್ದಾರೆ.
ಮುಂದುವರಿದು, ಒಟ್ಟಿಗೆ ಆಡಿದ ಸಮಯವನ್ನು ನಾವು ಖಂಡಿತಾ ಸಂಭ್ರಮಿಸಿದ್ದೇವೆ. ಹಾಗಾಗಿಯೇ ದೀರ್ಘಕಾಲ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ನಾವು ಯುವಕರಾಗಿದ್ದಾಗ, ಭಾರತ ಪರ 15 ವರ್ಷ ಆಡುತ್ತೇವೆಯೇ ಎಂಬುದಕ್ಕೆ ಖಾತ್ರಿ ಇರಲಿಲ್ಲ. ಇಷ್ಟು ದೀರ್ಘ ಮತ್ತು ನಿರಂತರ ಪ್ರಯಾಣ, ನಾವು ಹಂಚಿಕೊಂಡ ಎಲ್ಲಾ ನೆನಪುಗಳು, ಪ್ರತಿ ಕ್ಷಣಗಳಿಗೆ ಕೃತಜ್ಞರಾಗಿದ್ದೇವೆ ಮತ್ತು ಅವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2024ರ ಟಿ20 ವಿಶ್ವಕಪ್ ಮತ್ತು ಈ ವರ್ಷ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಿದೆ. ಎರಡೂ ಪ್ರಶಸ್ತಿ ಗೆಲುವಿನಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.