ಬ್ರಿಸ್ಬೇನ್: ಭಾರತ ತಂಡವುಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 6 ರನ್ ಅಂತರದ ಅಮೋಘ ಜಯ ಸಾಧಿಸಿತು.
ಬ್ಯಾಟಿಂಗ್ ವೇಳೆ ಆಕರ್ಷಕ ಅರ್ಧಶತಕ ಸಿಡಿಸಿದ ಉಪನಾಯಕ ಕೆ.ಎಲ್.ರಾಹುಲ್ (57), ಸೂರ್ಯಕುಮಾರ್ ಯಾದವ್ (50) ಬೌಲಿಂಗ್‌ನಲ್ಲಿ ಮಿಂಚಿದ ವೇಗಿ ಮೊಹಮ್ಮದ್ ಶಮಿ ಜೊತೆಗೆ ಅದ್ಭುತವಾಗಿ ಫೀಲ್ಡಿಂಗ್ ಮಾಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಗೆಲುವಿನ ರೂವಾರಿಗಳೆನಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ರಾಹುಲ್ ಮತ್ತು ಯಾದವ್ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186ರನ್ ಗಳಿಸಿತ್ತು.
ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಇನಿಂಗ್ಸ್‌ಗೆ ಆರಂಭಿಕ ಜೋಡಿಬಲ ತುಂಬಿತು. ಪಂದ್ಯದಲ್ಲಿ ಡೇವಿಡ್ ವಾರ್ನರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಅವರ ಬದಲು ನಾಯಕ ಆ್ಯರನ್ ಫಿಂಚ್ ಜೊತೆಇನಿಂಗ್ಸ್ ಆರಂಭಿಸಿದ ಮಿಚೇಲ್ ಮಾರ್ಶ್ ಕೇವಲ 18 ಎಸೆತಗಳಲ್ಲಿ 35 ರನ್ ಚಚ್ಚಿದರು. ಸೊಗಸಾಗಿ ಬ್ಯಾಟ್ ಬೀಸಿದ ಫಿಂಚ್ 56 ಎಸೆತಗಳಲ್ಲಿ 76ರನ್ ಸಿಡಿಸಿದರು.
ಗತಿ ಬದಲಿಸಿದ ಕೊಹ್ಲಿ
18 ಓವರ್‌ಗಳ ಆಟ ಮುಗಿದಾಗ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಉಳಿದ ಎರಡು ಓವರ್‌ಗಳಲ್ಲಿ 16 ರನ್ ಬೇಕಿತ್ತು.ಫಿಂಚ್ ಹಾಗೂ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಕ್ರೀಸ್‌ನಲ್ಲಿದ್ದರು. ಹರ್ಷಲ್ ಪಟೇಲ್ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಫಿಂಚ್ ವಿಕೆಟ್ ಒಪ್ಪಿಸಿದರು.
ನಂತರದ ಎಸೆತದಲ್ಲಿ ಡೇವಿಡ್ ರನೌಟ್ ಆದರು. ಆಗ ತಾನೆ ಕ್ರೀಸ್‌ಗೆ ಬಂದಿದ್ದ ಜೋಶ್ ಇಲಿಂಗ್ಸ್,ಹರ್ಷಲ್ ಎಸೆತವನ್ನು ಆನ್‌ಸೈಡ್‌ನತ್ತ ಬಾರಿಸಿ ಒಂದು ರನ್‌ಗಾಗಿ ಓಡಿದರು.ತಕ್ಷಣವೇ ಚೆಂಡನ್ನು ಹಿಡಿದವಿರಾಟ್ ಕೊಹ್ಲಿ, ಜಿಗಿಯುತ್ತಾ ವಿಕೆಟ್‌ನತ್ತ ಎಸೆದರು. ಡೇವಿಡ್ ಕ್ರೀಸ್ ತಲುಪುವ ಮುನ್ನ ಬೆಲ್ಸ್ ಹಾರಿತು. ಇದು ಪಂದ್ಯ ದಿಕ್ಕು ಬದಲಿಸಿತು.
ನಂತರ ಈ ಓವರ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಆಸಿಸ್, ಉಳಿದ ನಾಲ್ಕು ಎಸೆತಗಳಲ್ಲಿ ಐದು ರನ್ ಗಳಿಸಿಕೊಂಡಿತು.
ಕೊನೆಯ ಓವರ್‌ನಲ್ಲಿ ಮತ್ತೆ ಜಾದೂ
ಆಸಿಸ್‌ಗೆ ಗೆಲ್ಲಲು ಕೊನೇ ಓವರ್‌ನಲ್ಲಿ 11 ರನ್ ಬೇಕಿತ್ತು. ನಾಲ್ಕು ವಿಕೆಟ್‌ಗಳು ಬಾಕಿ ಇದ್ದವು. ಶಮಿ ಹಾಕಿದ ಈ ಓವರ್‌ನ ಮೊದಲೆರಡು ಎಸೆತಗಳನ್ನು ಎದುರಿಸಿದ ಪ್ಯಾಟ್ ಕಮಿನ್ಸ್, ತಲಾ ಎರಡೆರಡು ರನ್ ಗಳಿಸಿಕೊಂಡರು. ಹೀಗಾಗಿ 4 ಎಸೆತಗಳಲ್ಲಿ 7 ರನ್ ಗಳಿಸಬೇಕಿತ್ತು.ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಸಲುವಾಗಿ ಕಮಿನ್ಸ್‌ಬಲವಾಗಿ ಲಾಂಗ್ ಆನ್‌ನತ್ತ ಬಾರಿಸಿದರು. ಬೌಂಡರಿ ಗೆರೆ ಬಳಿ ಇದ್ದ ಕೊಹ್ಲಿ, ಮೇಲಕ್ಕೆ ಜಿಗಿತು ಒಂದೇ ಕೈಯಲ್ಲಿ ಹಿಡಿತಕ್ಕೆ ಪಡೆದರು.
ಒಂದು ವೇಳೆ ಚೆಂಡು ಸಿಕ್ಸರ್‌ಗೆ ಹೋಗಿದ್ದರೆ, ಆಸ್ಟ್ರೇಲಿಯಾ ಮುಂದಿನ ಮೂರು ಎಸೆತಗಳಲ್ಲಿ ಕೇವಲ 1 ರನ್ ಗಳಿಸಬೇಕಾಗುತ್ತಿತ್ತು.
ನಾಲ್ಕನೇ ಎಸೆತದಲ್ಲಿ ಆಸ್ಟನ್ ಅಗರ್ ರನೌಟಾದರೆ, 5 ಮತ್ತು 6ನೇ ಎಸೆತಗಳಲ್ಲಿ ಕ್ರಮವಾಗಿ ಜೋಶ್ ಇಲಿಂಗ್ಸ್ ಹಾಗೂ ಕೇನ್ ರಿಚರ್ಡ್‌ಸನ್ ಕ್ಲೀನ್ ಬೌಲ್ಡ್ ಆದರು.ಇದರಿಂದಾಗಿ ಆಸ್ಟ್ರೇಲಿಯಾ 180 ರನ್‌ಗಳಿಗೆ ಆಲೌಟ್ ಆಗಿ, ಅಲ್ಪ ಅಂತರದ ಸೋಲೊಪ್ಪಿಕೊಂಡಿತು.
ವಿರಾಟ್ ಕೊಹ್ಲಿಯ ಅಮೋಘ ಕ್ಷೇತ್ರ ರಕ್ಷಣೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಭಾರತ ತಂಡವು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಅಕ್ಟೋಬರ್ 23ರಂದು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.