ಭಾರತ ಕ್ರಿಕೆಟ್ ತಂಡದ 'ಸೂಪರ್ ಸ್ಟಾರ್' ವಿರಾಟ್ ಕೊಹ್ಲಿ
ಕೃಪೆ: ಪಿಟಿಐ
ಬೆಂಗಳೂರು: ಭಾರತ ಕ್ರಿಕೆಟ್ ತಂಡದ 'ಸೂಪರ್ ಸ್ಟಾರ್' ವಿರಾಟ್ ಕೊಹ್ಲಿ ಅವರು ಬರೋಬ್ಬರಿ ಏಳು ತಿಂಗಳ ಬಳಿಕ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ವರ್ಷ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಕೊಹ್ಲಿ, ಆ ಬಳಿಕ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಟೂರ್ನಿಯಲ್ಲಿ 5 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದ ಅವರು, 54.50ರ ಸರಾಸರಿಯಲ್ಲಿ 218 ರನ್ ಕಲೆಹಾಕುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಲು ನೆರವಾಗಿದ್ದರು.
ಟಿ20 ಮತ್ತು ಟೆಸ್ಟ್ ಮಾದರಿಗೆ ಈಗಾಗಲೇ ವಿದಾಯ ಹೇಳಿರುವ 'ಕಿಂಗ್', ಅಕ್ಟೋಬರ್ 18ರಂದು ಆಸ್ಟ್ರೇಲಿಯಾ ಎದುರು ಆರಂಭವಾಗಲಿರುವ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಆಸಿಸ್ ಸರಣಿಯು ವಿರಾಟ್ ಪಾಲಿಗೆ ನಿರ್ಣಾಯಕವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಮೂರು ಪಂದ್ಯಗಳ ಈ ಸರಣಿಯಲ್ಲಿ ಕೆಲವು ಅದ್ವಿತೀಯ ದಾಖಲೆಗಳನ್ನು ನಿರ್ಮಿಸುವ ಅವಕಾಶವೂ ವಿರಾಟ್‌ಗಿದೆ.
ಏಕದಿನದ ಕ್ರಿಕೆಟ್‌ನಲ್ಲಿ ಗರಿಷ್ಠ ರನ್: 2ನೇ ಸ್ಥಾನಕ್ಕೇರುವ ಅವಕಾಶ
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಸಾಲಿನಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕಾರ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಸಚಿನ್ 18,426 ರನ್ ಗಳಿಸಿದ್ದರೆ, ಸಂಗಕ್ಕಾರ 14,234 ರನ್ ಕಲೆಹಾಕಿದ್ದಾರೆ.
ವಿರಾಟ್ ಖಾತೆಯಲ್ಲಿ 14,181 ರನ್‌ಗಳಿವೆ. ಸಂಗಕ್ಕಾರ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಲು ಅವರಿಗೆ ಕೇವಲ 54 ರನ್ ಬೇಕಿದೆ.
ಯಾವುದೇ ಒಂದು ಮಾದರಿಯಲ್ಲಿ ಅತಿಹೆಚ್ಚು ಶತಕ
ಪ್ರಸ್ತುತ ಏಕದಿನ ಕ್ರಿಕೆಟ್‌ನಲ್ಲಿ 51 ಶತಕಗಳನ್ನು ಬಾರಿಸಿರುವ ವಿರಾಟ್, ಈ ಮಾದರಿಯಲ್ಲಿ ಶತಕಗಳ ಅರ್ಧಶತಕ ಸಿಡಿಸಿದ ಏಕೈಕ ಆಟಗಾರ ಎನಿಸಿದ್ದಾರೆ. ಆದಾಗ್ಯೂ ಯಾವುದೇ ಒಂದು ಮಾದರಿಯಲ್ಲಿ ಗರಿಷ್ಠ ಶತಕ ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲು ಅವರಿಗೆ ಇನ್ನೊಂದು 'ನೂರು' ಬೇಕಾಗಿದೆ.
ಟೆಸ್ಟ್ ಮಾದರಿಯಲ್ಲಿ ಸಚಿನ್ 51 ಶತಕ ಗಳಿಸಿದ್ದಾರೆ.
ವೇಗವಾಗಿ 28,000 ರನ್
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 28,000 ರನ್ ಕೆಲಹಾಕಿದ ಬ್ಯಾಟರ್ ಎನಿಸಿಕೊಳ್ಳಲು ಕೊಹ್ಲಿ ಇನ್ನು 401 ರನ್ ಬೇಕಿದೆ. ಮುಂದಿನ 26 ಇನಿಂಗ್ಸ್‌ಗಳಲ್ಲಿ ಇಷ್ಟು ರನ್ ಗಳಿಸಿದರೂ ಕೊಹ್ಲಿ 28 ಸಹಸ್ರ ರನ್ ಕಲೆಹಾಕಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹಾಗೆಯೇ, 418 ರನ್ ಗಳಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದ್ದಾರೆ.
ಈವರೆಗೆ 617 ಇನಿಂಗ್ಸ್‌ಗಳಲ್ಲಿ ಆಡಿರುವ ಕೊಹ್ಲಿ ಖಾತೆಯಲ್ಲಿ ಸದ್ಯ 27,599 ರನ್‌ಗಳಿವೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಪಟ್ಟಿಯಲ್ಲೂ ಸಚಿನ್ ಹಾಗೂ ಸಂಗಕ್ಕಾರ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಸಚಿನ್ 782 ಇನಿಂಗ್ಸ್‌ಗಳಲ್ಲಿ 34,357 ರನ್ ಗಳಿಸಿದ್ದರೆ, ಸಂಗಕ್ಕಾರ 666 ಇನಿಂಗ್ಸ್‌ಗಳಲ್ಲಿ 28,016 ರನ್ ಬಾರಿಸಿದ್ದಾರೆ.
ಚೇಸಿಂಗ್ ವೇಳೆ 6,000 ರನ್
ಏಕದಿನ ಮಾದರಿಯಲ್ಲಿ ಗುರಿ ಬೆನ್ನಟ್ಟುವ ವೇಳೆ 6,000 ರನ್ ಕಲೆಹಾಕಿದ ಸಾಧನೆ ಮಾಡಲು ಕೇವಲ 2 ರನ್ ಬೇಕಾಗಿದೆ. ಅದೇ ರೀತಿ, ಕಾಂಗರೂ ನೆಲದಲ್ಲಿ ಇನ್ನೊಂದು ಶತಕ ಸಿಡಿಸಿದರೆ, ವಿದೇಶ ಪಿಚ್‌ಗಳಲ್ಲಿ 30 ಸಲ ಮೂರಂಕಿ ಗಡಿ ದಾಟಿಸ ಸಾಧನೆಯನ್ನೂ ಮಾಡಲಿದ್ದಾರೆ.
ಸಚಿನ್ ಹಿಂದಿಕ್ಕಲು ಬೇಕು 67 ರನ್
ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲು ಕೊಹ್ಲಿಗೆ ಇನ್ನು ಕೇವಲ 67 ರನ್ ಬೇಕಾಗಿದೆ.
ಏಕದಿನ ಹಾಗೂ ಟಿ20 ಮಾದರಿಯಲ್ಲಿ ಆಡಿರುವ 427 ಪಂದ್ಯಗಳ 407 ಇನಿಂಗ್ಸ್‌ಗಳಿಂದ 18,369 ರನ್ ಕಲೆಹಾಕಿದ್ದಾರೆ.
ಸದ್ಯ ಅಗ್ರಸ್ಥಾನದಲ್ಲಿರುವ ಸಚಿನ್, 464 ಪಂದ್ಯಗಳ 453 ಇನಿಂಗ್ಸ್‌ಗಳಿಂದ 18,436 ರನ್ ಗಳಿಸಿದ್ದಾರೆ. ಸಚಿನ್ ಒಂದೇ ಒಂದು ಟಿ20 ಪಂದ್ಯದಲ್ಲಿ ಕಣಕ್ಕಿಳಿದು 10 ರನ್ ಗಳಿಸಿದ್ದಾರೆ. ಉಳಿದೆಲ್ಲವೂ ಏಕದಿನ ಮಾದರಿಯಲ್ಲಿ ಗಳಿಸಿದ ರನ್‌ಗಳಾಗಿವೆ.
ಸಚಿನ್, ಸನತ್ ಜೊತೆ ಸ್ಥಾನ ಹಂಚಿಕೊಳ್ಳುವ ಅವಕಾಶ
ಕೊಹ್ಲಿ, ಏಕದಿನ ಮಾದರಿಯಲ್ಲಿ ಸದ್ಯ 1,325 ಫೋರ್ ಮತ್ತು 152 ಸಿಕ್ಸರ್ ಸಹಿತ ಒಟ್ಟು 1,477 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದಾರೆ. ಇನ್ನು 23 ಬಾರಿ ಇಂತಹ (ಫೋರ್ or ಸಿಕ್ಸ್) ಸಾಧನೆ ಮಾಡಿದರೆ, 1,500ಕ್ಕೂ ಹೆಚ್ಚು ಸಲ ಚೆಂಡನ್ನು ಬೌಂಡರಿ ಗೆರೆಯಾಚೆಗೆ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸದ್ಯ, ಸಚಿನ್ ಹಾಗೂ ಶ್ರೀಲಂಕಾದ ಸನತ್ ಜಯಸೂರ್ಯ ಮಾತ್ರವೇ ಈ ಸಾಧನೆ ಮಾಡಿದ್ದಾರೆ.
ಸಚಿನ್, 2,016 ಫೋರ್, 195 ಸಿಕ್ಸ್ ಸಹಿತ 2,211 ಬಾರಿ ಹಾಗೂ ಜಯಸೂರ್ಯ 1,500 ಫೋರ್, 270 ಸಿಕ್ಸ್ ಸಹಿತ 1,770 ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆಗೆ ಅಟ್ಟಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಸಾಧನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.