ADVERTISEMENT

ಜಯ್‌ಕಿಶನ್‌ಗೆ ಪೋಷಾಕು ಉಡುಗೊರೆ ನೀಡಿದ ಡೇವಿಡ್‌ ವಾರ್ನರ್‌

ಏಜೆನ್ಸೀಸ್
Published 15 ಜೂನ್ 2019, 20:00 IST
Last Updated 15 ಜೂನ್ 2019, 20:00 IST
ಇಂಗ್ಲೆಂಡ್‌ನ ‘ನೆಟ್ಸ್‌’ ಬೌಲರ್‌ ಜಯ್‌ಕಿಶನ್‌ ಪ್ಲಾಹಾ ಅವರಿಗೆ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ ಆಟಗಾರರ ಸಹಿಯಿರುವ ವಿಶ್ವ ಕಪ್‌ ಪೋಷಾಕನ್ನು (ಜೆರ್ಸಿ) ಶನಿವಾರ ಉಡುಗೊರೆಯಾಗಿ ನೀಡಿದರು. –ಪಿಟಿಐ ಚಿತ್ರ
ಇಂಗ್ಲೆಂಡ್‌ನ ‘ನೆಟ್ಸ್‌’ ಬೌಲರ್‌ ಜಯ್‌ಕಿಶನ್‌ ಪ್ಲಾಹಾ ಅವರಿಗೆ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ ಆಟಗಾರರ ಸಹಿಯಿರುವ ವಿಶ್ವ ಕಪ್‌ ಪೋಷಾಕನ್ನು (ಜೆರ್ಸಿ) ಶನಿವಾರ ಉಡುಗೊರೆಯಾಗಿ ನೀಡಿದರು. –ಪಿಟಿಐ ಚಿತ್ರ    

ಲಂಡನ್‌: ಬ್ಯಾಟಿಂಗ್‌ ಅಭ್ಯಾಸ ಮಾಡುವಾಗ ತಮ್ಮ ಹೊಡೆತದಲ್ಲಿ ತಲೆಗೆ ಏಟು ತಿಂದಿದ್ದ ಇಂಗ್ಲೆಂಡ್‌ನ ‘ನೆಟ್ಸ್‌’ ಬೌಲರ್‌ ಜಯ್‌ಕಿಶನ್‌ ಪ್ಲಾಹಾ ಅವರಿಗೆ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ ಆಟಗಾರರ ಸಹಿಯಿರುವ ವಿಶ್ವ ಕಪ್‌ ಪೋಷಾಕನ್ನು (ಜೆರ್ಸಿ) ಶನಿವಾರ ಉಡುಗೊರೆಯಾಗಿ ನೀಡಿದ್ದಾರೆ.

ಓವಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಮೊದಲು ಜಯ್‌ಕಿಶನ್‌ ಮತ್ತು ಅವರ ತಾಯಿಯನ್ನು ಭೇಟಿ ಮಾಡಿದ ವಾರ್ನರ್‌, ಆಸ್ಟ್ರೇಲಿಯಾದ ಪೋಷಾಕು ನೀಡಿ ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸಿದರು.

ಇದೇ ಮೈದಾನದಲ್ಲಿ ಕಳೆದ ವಾರ, ಎಡಗೈ ಬ್ಯಾಟ್ಸ್‌ಮನ್‌ ವಾರ್ನರ್‌ ನೆಟ್‌ ಪ್ರಾಕ್ಟೀಸ್‌ ವೇಳೆ ಡ್ರೈವ್‌ ಮಾಡಿದ ಚೆಂಡು ಜಯ್‌ಕಿಶನ್‌ ತಲೆಗೆ ಬಡಿದಿತ್ತು. ‘ಜಯ್‌ಕಿಶನ್‌ ಕುಸಿದಾಗ, ವಾರ್ನರ್‌ ಗಾಬರಿಗೊಂಡಿದ್ದರು’ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್‌ ಹೇಳಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ತಂಡದವರು ತಕ್ಷಣ ಪ್ರಾಕ್ಟೀಸ್‌ ಸ್ಥಗಿತಗೊಳಿಸಿದ್ದರು. ತಪಾಸಣೆ ನಡೆಸಿದಾಗ ಅವರಿಗೆ ಗಂಭೀರ ಗಾಯಗಳಾಗಿಲ್ಲ ಎಂಬುದು ಗೊತ್ತಾಗಿತ್ತು ಎಂದು ವಿಶ್ವಕಪ್‌ನ ಅಧಿಕೃತ ಟ್ವಿಟರ್‌ ವರದಿ ತಿಳಿಸಿದೆ.

‘ವಾರ್ನರ್‌ ನನ್ನನ್ನು ಭೇಟಿಯಾಗಿ ವಿಶ್ವಕಪ್‌ ಜೆರ್ಸಿ ನೀಡಿದ್ದಾರೆ. ಇದು ಖುಷಿಕೊಟ್ಟಿದೆ’ ಎಂದು ಜಯ್‌ಕಿಶನ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ ವಿಡಿಯೊದಲ್ಲಿ ಹೇಳಿದ್ದಾರೆ.

ವಾರ್ನರ್‌, ಹಾಲಿ ವಿಶ್ವ ಕಪ್‌ನಲ್ಲಿ ಒಂದು ಶತಕ, ಎರಡು ಅರ್ಧ ಶತಕ ಸೇರಿ 281 ರನ್‌ ಕಲೆಹಾಕಿದ್ದಾರೆ.

2014ರಲ್ಲಿ ದೇಶಿಯ ಪಂದ್ಯವೊಂದರ ವೇಳೆ ಟೆಸ್ಟ್‌ ಆಟಗಾರ ಫಿಲಿಪ್‌ ಹ್ಯೂಸ್‌ ಅವರ ತಲೆಬುರುಡೆಗೆ ಚೆಂಡು ಬಡಿದ ಪರಿಣಾಮ ಅವರು ಮೃತಪಟ್ಟಿದ್ದು, ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಶೋಕ ಮಡುಗಟ್ಟಿತ್ತು.

ನ್ಯೂಸೌತ್‌ ವೇಲ್ಸ್‌ ಮತ್ತು ದಕ್ಷಿಣ ಆಸ್ಟ್ರೇಲಿಯಾ ನಡುವಣ ಆ ಪಂದ್ಯದಲ್ಲಿ ವಾರ್ನರ್‌ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.