ADVERTISEMENT

IND vs NZ: ವಾಷಿಂಗ್ಟನ್ ಸುಂದರ್ ಗಾಯಾಳು; ಬಿಸಿಸಿಐಯಿಂದ ಅಚ್ಚರಿಯ ಆಯ್ಕೆ

ಪಿಟಿಐ
Published 12 ಜನವರಿ 2026, 10:26 IST
Last Updated 12 ಜನವರಿ 2026, 10:26 IST
<div class="paragraphs"><p>ಆಯುಷ್ ಬಡೋನಿ</p></div>

ಆಯುಷ್ ಬಡೋನಿ

   

ನವದೆಹಲಿ: ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಪಕ್ಕೆಲುಬಿನ ನೋವಿನಿಂದ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಆಡುವ ತಂಡಕ್ಕೆ ದೆಹಲಿಯ ಬ್ಯಾಟರ್ ಆಯುಷ್‌ ಬದೋನಿ ಸ್ಥಾನ ಪಡೆದಿದ್ದಾರೆ.

ಇದೇ ಮೊದಲ ಬಾರಿ ಬದೋನಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವಾಷಿಂಗ್ಟನ್ ಅವರು ಭಾನುವಾರ ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು. 26 ವರ್ಷ ವಯಸ್ಸಿನ ವಾಷಿಂಗ್ಟನ್ ಐದು ಓವರ್ ಬೌಲಿಂಗ್ ಮಾಡಿದ ನಂತರ ನೋವಿನಿಂದ ಮೈದಾನ ತೊರೆದಿದ್ದರು. ತಂಡ ಆರು ವಿಕೆಟ್‌ ಕಳೆದುಕೊಂಡಾಗ ಆಡಲು ಬಂದಿದ್ದರು. ಭಾರತ ನಾಲ್ಕು ವಿಕೆಟ್‌ಗಳ ಜಯಪಡೆದಿತ್ತು.

ADVERTISEMENT

‘ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಪಕ್ಕೆಲುಬಿನ ಕೆಳಭಾಗದಲ್ಲಿ ವಾಷಿಂಗ್ಟನ್ ಅವರು ತೀವ್ರ ನೋವಿಗೆ ಒಳಗಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಇನ್ನಷ್ಟು ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದು, ಅವರು ಉಳಿದೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ’ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.

‘ಪುರುಷರ ತಂಡದ ಆಯ್ಕೆ ಸಮಿತಿ ಅವರ ಸ್ಥಾನದಲ್ಲಿ ಆಯುಷ್‌ ಬದೋನಿ ಅವರನ್ನು ಹೆಸರಿಸಿದೆ. ಅವರು ಬುಧವಾರ ರಾಜಕೋಟ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಬ್ಯಾಟರ್ ಆಗಿರುವ 26 ವರ್ಷ ವಯಸ್ಸಿನ ಬದೋನಿ ಸಾಂದರ್ಬಿಕ ಆಫ್‌ ಸ್ಪಿನ್ ಬೌಲರ್ ಸಹ. ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್‌ದಲ್ಲಿ ಆಡುವ ಮೂಲಕ ಗಮನ ಸೆಳೆದಿದ್ದರು. ಮೊದಲ ದರ್ಜೆ ಕ್ರಿಕೆಟ್‌ನಲ್ಲಿ ಅವರು 57.96ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಪಂತ್‌ ಬದಲು ಜುರೆಲ್‌:

ವಿಕೆಟ್ ಕೀಪರ್ ರಿಷಭ್ ಪಂತ್ ಅವರು ತಂಡದ ಅಭ್ಯಾಸದ ವೇಳೆ ಪಕ್ಕೆಲುಬಿನ ನೋವಿಗೆ ಒಳಗಾಗಿದ್ದು, ಅವರ ಬದಲು ಧ್ರುವ್ ಜುರೇಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.