ADVERTISEMENT

ಏಷ್ಯಾ ಕ್ರೀಡಾಕೂಟ: ಭಾರತ ತಂಡಕ್ಕೆ ಸ್ಮೃತಿ ನಾಯಕತ್ವ, ಮಲೇಷ್ಯಾ ವಿರುದ್ಧ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 23:30 IST
Last Updated 20 ಸೆಪ್ಟೆಂಬರ್ 2023, 23:30 IST
ಸ್ಮೃತಿ ಮಂದಾನ
ಸ್ಮೃತಿ ಮಂದಾನ   

 ಹಾಂಗ್‌ಝೌ(ಚೀನಾ): ಏಷ್ಯಾ ಕ್ರೀಡಾಕೂಟದ ಮಹಿಳೆಯರ ಕ್ರಿಕೆಟ್‌ ಟೂರ್ನಿಯು ಗುರುವಾರ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಭಾರತ ತಂಡವು ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಭಾರತ ತಂಡವನ್ನು ಸ್ಮೃತಿ ಮಂದಾನ ಮುನ್ನಡೆಸುವರು.  ಈಚೆಗೆ ಬಾಂಗ್ಲಾದಲ್ಲಿ ನಡೆದಿದ್ದ ಪಂದ್ಯದಲ್ಲಿ ತಾವು ತೋರಿದ್ದ ಅಶಿಸ್ತಿನ ವರ್ತನೆಯಿಂದಾಗಿ  ಹರ್ಮನ್‌ಪ್ರೀತ್ ಕೌರ್ ಅವರನ್ನು ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ಆದ್ದರಿಂದ ಅವರ ಗೈರು ಹಾಜರಿಯಲ್ಲಿ ಸ್ಮೃತಿ ನಾಯಕಿಯಾಗಿದ್ದಾರೆ.

ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ ಅವರ ಮೇಲೆ ಬ್ಯಾಟಿಂಗ್ ವಿಭಾಗ ಅವಲಂಬಿತವಾಗಿದೆ. ಕನ್ನಡತಿ ರಾಜೇಶ್ವರಿ ಗಾಯಕವಾಡ, ದೀಪ್ತಿ ಶರ್ಮಾ, ತಿತಾಸ್ ಸಾಧು ಹಾಗೂ ಪೂಜಾ ವಸ್ತ್ರಕರ್ ಅವರು ಬೌಲಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ.

ADVERTISEMENT

ಅಷ್ಟೇನೂ ಅನುಭವಿಗಳು ಇಲ್ಲದ ವಿನಿಫ್ರೆಡ್ ದುರೈಸಿಂಗಂ ನಾಯಕತ್ವದ ಮಲೇಷ್ಯಾ ತಂಡದ ವಿರುದ್ಧ ಸುಲಭ ಜಯಸಾಧಿಸುವ ವಿಶ್ವಾಸದಲ್ಲಿ ಭಾರತ ತಂಡವಿದೆ.

ಪಂದ್ಯ ಆರಂಭ: ಬೆಳಿಗ್ಗೆ 6.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

‘ಏಷ್ಯನ್ ಕೂಟಕ್ಕೆ ಕ್ರಿಕೆಟ್ ಸೇರ್ಪಡೆ ಸ್ವಾಗತಾರ್ಹ‘

ಬೆಂಗಳೂರು: ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ ನಡೆಯಾಗಿದೆ. ಇದರಿಂದಾಗಿ ಮಹಿಳಾ ಕ್ರಿಕೆಟ್ ಬೆಳವಣಿಗೆ ಉತ್ತಮವಾಗಲಿದೆ ಎಂದು ಭಾರತ ತಂಡದ ಮಾಜಿ ಆಟಗಾರ್ತಿ ನೂಷಿನ್ ಅಲಿ ಖಾದೀರ್ ಹೇಳಿದರು.

‘ಹನ್ನೊಂದು ಟಿ20 ಪಂದ್ಯಗಳಲ್ಲಿ ನಾಯಕಿಯಾಗಿ ಆಡಿದ ಅನುಭವ ಸ್ಮೃತಿಗೆ ಇದೆ. ಮಹಾರಾಷ್ಟ್ರ ತಂಡವನ್ನೂ ಮುನ್ನಡೆಸಿದ್ದಾರೆ. ಅವರ ಶಾಂತಸ್ವಭಾವವು ತಂಡದಲ್ಲಿ ಉತ್ತಮ ವಾತಾವರಣ ಕಾಪಾಡುತ್ತದೆ‘ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ನೂಷಿನ್ ಹೇಳಿದರು.

‘ಹರ್ಮನ್‌ ತುಂಬಾ ಅನುಭವಿ ಆಟಗಾರ್ತಿ. ವಿಶ್ವಕಪ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಆಡಿದ್ದಾರೆ. ಉತ್ತಮ ಫಾರ್ಮ್‌ನಲ್ಲಿಯೂ ಇದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಅವರ ಕೊರತೆ ಕಾಡಲಿದೆ. ನಂತರ ಅವರು ಮರಳುವುದರಿಂದ ತಂಡದ ಬಲ ಹೆಚ್ಚುವುದು‘ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.