
ಹರ್ಮನ್‌ಪ್ರೀತ್ ಕೌರ್
ಚಿತ್ರ ಕೃಪೆ:ಪಿಟಿಐ
ಮುಂಬೈ: ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ 2025ರ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯದ ಬಳಿಕ ಮಾತನಾಡಿದ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಮಾತನಾಡಲು ಪದಗಳೇ ಇಲ್ಲ. ನಮ್ಮ ಆಟಗಾರ್ತಿಯರು ಈಗಾಗಲೇ ಫೈನಲ್ ಪಂದ್ಯದತ್ತ ಗಮನಹರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ ಎಂದರು.
ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ನೀಡಿದ್ದ 339 ರನ್‌ಗಳ ಬೃಹತ್ ಗುರಿಯನ್ನು ಜೆಮಿಮಾ ರಾಡ್ರಿಗಸ್ ಸಿಡಿಸಿದ ಅಜೇಯ ಶತಕದ ನೆರವಿನಿಂದ 5 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
‘ಮಾತನಾಡಲು ನನ್ನ ಬಳಿ ಪದಗಳೇ ಇಲ್ಲ, ಇಂದು ನಾವೆಲ್ಲರೂ ಚೆನ್ನಾಗಿ ಆಡಿದ್ದೇವೆ. ಈ ಫಲಿತಾಂಶದಿಂದ ಸಂತೋಷಗೊಂಡಿದ್ದೇವೆ. ಇನ್ನೂ ಒಂದು ಪಂದ್ಯ ಬಾಕಿ ಇದೆ. ನಾವು ಈಗಾಗಲೇ ಮುಂದಿನ ಪಂದ್ಯದ ಬಗ್ಗೆ ಯೋಚಿಸುತ್ತಿದ್ದೇವೆ. ಇದು ನಾವು ಪಂದ್ಯದ ಕುರಿತು ಎಷ್ಟು ಗಮನಹರಿಸಿದ್ದೇವೆ ಮತ್ತು ವಿಶ್ವಕಪ್ ಗೆಲ್ಲಲು ಎಷ್ಟು ಉತ್ಸುಕರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ’ ಎಂದಿದ್ದಾರೆ.
ತವರಿನಲ್ಲಿ ವಿಶ್ವಕಪ್ ಆಡುವುದು ವಿಶೇಷವಾಗಿದೆ. ಇನ್ನೊಂದು ಪಂದ್ಯ ಬಾಕಿ ಇದೆ. ಅದನ್ನು ಗೆದ್ದು ಅಭಿಮಾನಿಗಳು ಮತ್ತು ಕುಟುಂಬಕ್ಕೆ ಉಡುಗೊರೆ ನೀಡಲು ಎದುರು ನೋಡುತ್ತಿದ್ದೇವೆ ಎಂದರು.
ಚೇಸಿಂಗ್‌ನಲ್ಲಿ ಅಮೋಘ ಶತಕ ಸಿಡಿಸಿದ ಜೆಮಿಮಾ ರಾಡ್ರಿಗಸ್ ಕುರಿತು ಮಾತನಾಡಿದ ಕೌರ್, ‘ಜೆಮಿ ಯಾವಾಗಲೂ ತಂಡಕ್ಕೆ ಉತ್ತಮ ಕೊಡುಗೆ ನೀಡಲು ಬಯಸುತ್ತಾರೆ. ಅವರು ತಂಡದ ಸ್ಥಿತಿ ಅರಿತು ಜವಾಬ್ದಾರಿ ತೆಗೆದುಕೊಂಡು ಆಡುತ್ತಾರೆ. ನಮಗೆ ಅವರ ಮೇಲೆ ಆ ನಂಬಿಕೆ ಇತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.