ಆರ್‌ಸಿಬಿಯ ಕನಿಕಾ ಅಹುಜಾ ಹಾಗೂ ರಿಚಾ ಘೋಷ್ ಬ್ಯಾಟಿಂಗ್ ವೇಳೆ...
ಚಿತ್ರಕೃಪೆ: @RCBTweets
ವಡೋದರಾ: ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಗುಜರಾತ್ ಜೈಂಟ್ಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನತ್ತಿ ಗೆಲುವು ಸಾಧಿಸಿದೆ.
ಆ ಮೂಲಕ ಡಬ್ಲ್ಯುಪಿಎಲ್ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಮೊತ್ತ ಚೇಸ್ ಮಾಡಿ ಗೆದ್ದ ದಾಖಲೆ ಬರೆದಿದೆ.
ಇಲ್ಲಿನ ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ, ಅದಕ್ಕೆ ತಕ್ಕಂತೆ ಆಟ ನಡೆಯಲಿಲ್ಲ. ಅನುಭವಿ ಬೆತ್ ಮೂನಿ ಜೊತೆ ಇನಿಂಗ್ಸ್ ಆರಂಭಿಸಿ ಲೌರಾ ವೋಲ್ವರ್ಡ್ತ್ (6) ಹಾಗೂ ದಯಾಳನ್ ಹೇಮಲತಾ (4) ವೈಫಲ್ಯ ಅನುಭವಿಸಿದರೂ, ನಂತರ ಬಂದ ನಾಯಕಿ ಆಶ್ಲೇ ಗಾರ್ಡ್ನರ್ ಅಬ್ಬರಿಸಿದರು.
ಮೂನಿ (42 ಎಸೆತಗಳಲ್ಲಿ 56 ರನ್) ಹಾಗೂ ಆಶ್ಲೇ (37 ಎಸೆತಗಳಲ್ಲಿ 79 ರನ್) ಬೀಸಾಟದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 201 ರನ್ ಕಲೆಹಾಕಿತು.
ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ ಆರಂಭಿಸಿದ ನಾಯಕಿ ಮಂದಾನ (9 ರನ್) ಹಾಗೂ ಡೇನಿಯಲ್ ವ್ಯಾಟ್ (6 ರನ್) ತಂಡದ ಮೊತ್ತ 14 ರನ್ ಆಗುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು. ಬಳಿಕ, ಮಹಿಳಾ ಕ್ರಿಕೆಟ್‌ನ ಸ್ಟಾರ್ ಎಲಿಸ್ ಪೆರ್ರಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಆಟ ರಂಗೇರಿತು.
ಪೆರ್ರಿ 34 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರೆ, ರಿಚಾ 27 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ರಿಚಾಗೆ ಸಾಥ್ ನೀಡಿದ ಕನಿಕಾ ಅಹುಜಾ, 13 ಎಸೆತಗಳಲ್ಲಿ 30 ರನ್ ಬಾರಿಸಿ ಜಯದ ಸಂಭ್ರಮದಲ್ಲಿ ಜೊತೆಯಾದರು. 18.3 ಓವರ್‌ಗಳಲ್ಲೇ 202 ರನ್ ಗಳಿಸಿದ ಆರ್‌ಸಿಬಿ, 6 ವಿಕೆಟ್ ಅಂತರದಿಂದ ಗೆದ್ದಿತು.
ಇದರೊಂದಿಗೆ, ಬೆಂಗಳೂರು ಮಹಿಳಾ ಪಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ತನ್ನ ಮುಂದಿನ ಪಂದ್ಯವನ್ನು ಇದೇ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಫೆಬ್ರುವರಿ 17ರಂದು ಆಡಲಿದೆ. ಗುಜರಾತ್ ಬಳಗಕ್ಕೆ ಫೆಬ್ರುವರಿ 16ರಂದು ಯುಪಿ ವಾರಿಯರ್ಸ್ ಎದುರಾಗಲಿದೆ.
ಮೊದಲ ಪಂದ್ಯದ ಪ್ರಮುಖ ಅಂಶಗಳು ಇಲ್ಲಿವೆ.
ಪಂದ್ಯದ ಗತಿ ಬದಲಿಸಿದ 16ನೇ ಓವರ್
ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ 15 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಹೀಗಾಗಿ, ಪಂದ್ಯವು ಗುಜರಾತ್ ನಿಯಂತ್ರಣದಲ್ಲಿತ್ತು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಆಶ್ಲೇ ಗಾರ್ಡ್ನರ್ ಬೌಲಿಂಗ್‌ನಲ್ಲಿಯೂ ನಿಯಂತ್ರಣ ಸಾಧಿಸಿದ್ದರು. ಮೊದಲ 2 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.
ಹೀಗಾಗಿ, ಎಚ್ಚರಿಕೆಯಿಂದ ಆಡುವ ಒತ್ತಡ ಕ್ರೀಸ್‌ನಲ್ಲಿದ್ದ ರಿಚಾ ಮತ್ತು ಕನಿಕಾ ಮೇಲಿತ್ತು.
ಆದರೆ, ಮೊದಲ ಎಸೆತದಿಂದಲೇ ಪ್ರಹಾರ ಶುರು ಮಾಡಿದ ರಿಚಾ, ನಾಲ್ಕು ಬೌಂಡರಿ ಒಂದು ಸಿಕ್ಸರ್ ಸಹಿತ 22 ರನ್ ಚಚ್ಚಿದರು. ಒಂದು ಎಸೆತ ವೈಡ್ ಆದದ್ದರಿಂದ ಒಟ್ಟು 23 ರನ್‌ಗಳು ಬಂದವು. ಹೀಗಾಗಿ, ಆರ್‌ಸಿಬಿ ಮೇಲಿದ್ದ ಒತ್ತಡ ಇಳಿಯಿತು. ಈ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು.
ಗರಿಷ್ಠ ಗುರಿ ಬೆನ್ನತ್ತಿ ದಾಖಲೆ ಬರೆದ ಆರ್‌ಸಿಬಿ
2024ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ನೀಡಿದ್ದ 191 ರನ್‌ಗಳ ಗುರಿ ಬೆನ್ನತ್ತಿ ಗೆದ್ದಿದ್ದು, ಡಬ್ಲ್ಯುಪಿಎಲ್‌ನಲ್ಲಿ ಈ ವರೆಗೆ ದಾಖಲೆಯಾಗಿತ್ತು. ಅದನ್ನು ಈ ಬಾರಿಯ ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿ ಮುರಿದಿದೆ.
202 ರನ್: ಗುಜರಾತ್ ಜೈಂಟ್ಸ್ ಎದುರು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2025
191 ರನ್: ಗುಜರಾತ್ ಜೈಂಟ್ಸ್ ಎದುರು ಗೆದ್ದ ಮುಂಬೈ ಇಂಡಿಯನ್ಸ್, 2024
189 ರನ್: ಗುಜರಾತ್ ಜೈಂಟ್ಸ್ ಎದುರು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2023
179 ರನ್: ಯುಪಿ ವಾರಿಯರ್ಸ್ ಎದುರು ಗೆದ್ದ ಗುಜರಾತ್ ಜೈಂಟ್ಸ್, 2023
172 ರನ್: ಮುಂಬೈ ಇಂಡಿಯನ್ಸ್ ಎದುರು ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, 2024
ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ರನ್
ಈ ಪಂದ್ಯದಲ್ಲಿ ಒಟ್ಟು 403 ರನ್ (ಗುಜರಾತ್ 201 ರನ್ ಹಾಗೂ ಆರ್‌ಸಿಬಿ 202 ರನ್) ಹರಿದು ಬಂತು. ಇದು, ಡಬ್ಲ್ಯುಪಿಎಲ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ರನ್ ಆಗಿದೆ.
403 ರನ್: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2025
391 ರನ್: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2023
386 ರನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್, 2023
381 ರನ್: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, 2024
380 ರನ್: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್, 2023
ನಾಲ್ಕು ಅರ್ಧಶತಕ
ಈ ಪಂದ್ಯದಲ್ಲಿ ಒಟ್ಟು ನಾಲ್ಕು ಬ್ಯಾಟರ್‌ಗಳು ಅರ್ಧಶತಕ ಸಿಡಿಸಿದರು. ಗುಜರಾತ್ ಪರ ಬೆತ್ ಮೂನಿ, ಆಶ್ಲೇ ಗಾರ್ಡ್ನರ್ ಹಾಗೂ ಆರ್‌ಸಿಬಿ ಎಲಿಸ್ ಪೆರ್ರಿ, ರಿಚಾ ಘೋಷ್ ಅರ್ಧಶತಕ ಬಾರಿಸಿದರು.
ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ನಡುವೆ 2023ರಲ್ಲಿ ನಡೆದ ಪಂದ್ಯದಲ್ಲಿಯೂ ನಾಲ್ಕು ಅರ್ಧಶತಕಗಳು ದಾಖಲಾಗಿದ್ದವು. ಗುಜರಾತ್ ತಂಡದ ದಯಾಳನ್ ಹೇಮಲತಾ, ಆಶ್ಲೇ ಗಾರ್ಡ್ನರ್ ಮತ್ತು ವಾರಿಯರ್ಸ್‌ನ ತಹ್ಲಿಯಾ ಮೆಗ್ರಾ, ಗ್ರೇಸ್ ಹ್ಯಾರಿಸ್ ಈ ಸಾಧನೆ ಮಾಡಿದ್ದರು.
5ನೇ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟ
ರಿಚಾ ಹಾಗೂ ಕನಿಕಾ ಜೋಡಿ ಕಲೆ ಹಾಕಿದ ಅಜೇಯ 93 ರನ್, ಡಬ್ಲ್ಯುಪಿಎಲ್‌ನಲ್ಲಿ 5ನೇ ವಿಕೆಟ್ ಜೊತೆಯಾಟದಲ್ಲಿ ದಾಖಲಾದ ಗರಿಷ್ಠ ರನ್ ಆಗಿದೆ.
ಡೆಲ್ಲಿ ತಂಡದ ಜೆಸ್ ಜಾನ್ಸನ್ ಹಾಗೂ ಜೆಮಿಮಾ ರಾಡ್ರಿಗಸ್ 2023ರಲ್ಲಿ 67 ರನ್ ಗಳಿಸಿದ್ದು, ಈ ವರೆಗೆ ದಾಖಲೆಯಾಗಿತ್ತು.
16 ಸಿಕ್ಸರ್
ಈ ಪಂದ್ಯದಲ್ಲಿ ಒಟ್ಟು 16 ಸಿಕ್ಸರ್‌ಗಳು ಸಿಡಿದವು. ಗುಜರಾತ್ ಪರ ಆಶ್ಲೇ ಗಾರ್ಡ್ನರ್ ಎಂಟು ಸಿಕ್ಸರ್, ದಿಯಾಂದ್ರ ಡಾಟಿನ್ ಮತ್ತು ಸಿಮ್ರನ್ ಶೇಕ್ ತಲಾ ಒಂದು ಸಿಕ್ಸ್ ಬಾರಿಸಿದರು. ಆರ್‌ಸಿಬಿಯ ಎಲಿಸ್ ಪೆರ್ರಿ 2 ಮತ್ತು ರಿಚಾ ಘೋಷ್ 4 ಸಿಕ್ಸರ್ ಚಚ್ಚಿದರು.
ಇದಕ್ಕೂ ಮೊದಲು, 2024ರಲ್ಲಿ ನಡೆದ ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ 19 ಸಿಕ್ಸರ್‌ಗಳು ಸಿಡಿದಿದ್ದವು. ಅದು ಸದ್ಯ ದಾಖಲೆಯಾಗಿದೆ.
ಗಾರ್ಡ್ನರ್ ಅವರು ಸಿಕ್ಸ್ ಗಳಿಕೆಯಲ್ಲಿ, ಸೋಫಿ ಡಿವೈನ್ ದಾಖಲೆಯನ್ನು ಸರಿಗಟ್ಟಿದ್ದರು. ಡಿವೈನ್, 2023 ರಲ್ಲಿ ಗುಜರಾತ್ ವಿರುದ್ಧವೇ 8 ಸಿಕ್ಸ್ ಬಾರಿಸಿದ್ದರು. ಇದು, ಇನಿಂಗ್ಸ್‌ವೊಂದರಲ್ಲಿ ಯಾವುದೇ ಬ್ಯಾಟರ್ ಗಳಿಸಿದ ಗರಿಷ್ಠ ಸಿಕ್ಸರ್ ಆಗಿದೆ.
ಗರಿಷ್ಠ ರನ್‌ರೇಟ್‌ನಲ್ಲಿ ಅರ್ಧಶತಕದ ಜೊತೆಯಾಟ
ಗುಜರಾತ್‌ನ ಬೃಹತ್ ಗುರಿ ಎದುರು 5ನೇ ವಿಕೆಟ್ ಜೊತೆಯಾದ ರಿಚಾ ಹಾಗೂ ಕನಿಕಾ ಜೋಡಿ, 15.08ರ ರನ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಒಟ್ಟು 37 ಎಸೆತಗಳನ್ನು ಜೊತೆಯಾಗಿ ಎದುರಿಸಿದ ಈ ಇಬ್ಬರು, ಬರೋಬ್ಬರಿ 93 ರನ್ ಸಿಡಿಸಿದರು. ಇದು, ಡಬ್ಲ್ಯುಪಿಎಲ್‌ನಲ್ಲಿ 50ಕ್ಕಿಂತ ಅಧಿಕ ರನ್ ಜೊತೆಯಾಟವಾಡಿದ ಜೋಡಿ ಕಾಯ್ದುಕೊಂಡ ಎರಡನೇ ಅತ್ಯುತ್ತಮ ರನ್‌ರೇಟ್ ಆಗಿದೆ.
ಯುಪಿ ವಾರಿಯರ್ಸ್ ಪಡೆಯ ಗ್ರೇಸ್ ಹ್ಯಾರಿಸ್ ಹಾಗೂ ಸೋಫಿ ಎಕ್ಲ್‌ಸ್ಟೋನ್ 2023ರಲ್ಲಿ ಕೇವಲ 25 ಎಸೆತಗಳಲ್ಲಿ 16.8ರ ರನ್‌ರೇಟ್‌ನಲ್ಲಿ 70 ರನ್ ಬಾರಿಸಿದ್ದರು. ಅದೇ ವರ್ಷ, 43 ಎಸೆತಗಳಲ್ಲಿ 14.93ರ ರನ್‌ರೇಟ್‌ನಲ್ಲಿ 107 ರನ್ ಕಲೆಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ಮೆಗ್ ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ, ಮೂರನೇ ಸ್ಥಾನದಲ್ಲಿದ್ದಾರೆ.
ವೇಗದ ಅರ್ಧಶತಕ
ಗುಜರಾತ್ ಬೌಲರ್‌ಗಳಿಗೆ ಚಳಿ ಬಿಡಿಸಿದ ರಿಚಾ ಘೋಷ್, ಕೇವಲ 23 ಎಸೆತಗಳಲ್ಲೇ 50 ರನ್ ಗಡಿ ದಾಟಿದರು. ಇದು, ಡಬ್ಲ್ಯುಪಿಎಲ್‌ನ 5ನೇ ವೇಗದ ಅರ್ಧಶತಕವಾಗಿದೆ.
18 ಎಸೆತ: ಶೋಫಿ ಡಂಕ್ಲೀ (ಗುಜರಾತ್ ಜೈಂಟ್ಸ್) vs ಆರ್‌ಸಿಬಿ, 2023
19 ಎಸೆತ: ಶೆಫಾಲಿ ವರ್ಮಾ (ಡೆಲ್ಲಿ ಕ್ಯಾಪಿಟಲ್ಸ್) vs ಗುಜರಾತ್ ಜೈಂಟ್ಸ್, 2023
20 ಎಸೆತ: ಸೋಫಿ ಡಿವೈನ್ (ಆರ್‌ಸಿಬಿ) vs ಗುಜರಾತ್ ಜೈಂಟ್ಸ್, 2023
22 ಎಸೆತ: ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್) vs ಗುಜರಾತ್ ಜೈಂಟ್ಸ್, 2023
23 ಎಸೆತ: ರಿಚಾ ಘೋಷ್ (ಆರ್‌ಸಿಬಿ) vs ಗುಜರಾತ್ ಜೈಂಟ್ಸ್
ಹೆಚ್ಚು ಅರ್ಧಶತಕ
ಡಬ್ಲ್ಯುಪಿಎಲ್‌ನ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆ ಮೆಗ್ ಲ್ಯಾನಿಂಗ್ ಅವರ ಹೆಸರಲ್ಲಿದೆ. ಅವರು ಒಟ್ಟು 6 ಸಲ ಈ ಸಾಧನೆ ಮಾಡಿದ್ದಾರೆ. ತಲಾ ಐದು ಅರ್ಧಶತಕ ಗಳಿಸಿರುವ ಹರ್ಮನ್‌ಪ್ರೀತ್ ಕೌರ್, ಶೆಫಾಲಿ ವರ್ಮಾ ಹಾಗೂ ಎಲಿಸ್ ಪೆರ್ರಿ ನಂತರದ ಸ್ಥಾನಗಳಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.